ADVERTISEMENT

ಅಯೋಧ್ಯೆಯಲ್ಲಿತ್ತು ದೈವದಂಪತಿ ಶಿಲ್ಪ, ದೇಗುಲದ ವಿನ್ಯಾಸ: ಪುರಾತತ್ವ ಇಲಾಖೆ ವರದಿ

ಮಂದಿರವೋ, ಮಸೀದಿಯೋ?: ಸರ್ವೇಕ್ಷಣಾ ವರದಿಗಳ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 1:29 IST
Last Updated 10 ನವೆಂಬರ್ 2019, 1:29 IST
   

2003ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಸಂಸ್ಥೆಯು ಬಾಬರಿ ಮಸೀದಿ ಇದ್ದ ಜಾಗ ಮತ್ತು ಸುತ್ತಮುತ್ತಲಿನ ಜಾಗದಲ್ಲಿ ಉತ್ಖನನ ನಡೆಸಿದಾಗ, ಸುಟ್ಟ ಇಟ್ಟಿಗೆಯ ಕಿರುಗೋಡೆಗಳು, ದೈವದಂಪತಿಯ ಶಿಲ್ಪಗಳು, ಕಮಲದ ಹೂವಿನ ರಚನೆಗಳು ಅಲ್ಲಿ ಪತ್ತೆಯಾಗಿವೆ. ಇವೆಲ್ಲವೂ ಭಾರಿ ಕಟ್ಟಡವೊಂದರ ಭಾಗಗಳಾಗಿದ್ದು, ಈ ಕಟ್ಟಡದ ವಿನ್ಯಾಸವು ಉತ್ತರ ಭಾರತದ ದೇವಾಲಯಗಳ ವಿನ್ಯಾಸವನ್ನು ಹೋಲುತ್ತದೆ ಎಂದು ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ವರದಿ ಹೇಳಿತ್ತು.

ಅಯೋಧ್ಯೆ ಬಗ್ಗೆ ಒಟ್ಟು ಆರು ಸರ್ವೇಕ್ಷಣೆಗಳನ್ನು ಕೈಗೊಳ್ಳಲಾಗಿತ್ತು. ಇವುಗಳಲ್ಲಿ ಐದು ಪೂರ್ಣಗೊಂಡಿದ್ದು, ಒಂದನ್ನು ಅರ್ಧದಲ್ಲೇ ಕೈಬಿಡಲಾಗಿದೆ. ವಿವಾದಿತ ರಾಮಜನ್ಮಭೂಮಿ–ಬಾಬರಿ ಮಸೀದಿ ಇರುವ ಸ್ಥಳದ ಬಗ್ಗೆಯೂ ಈ ಸರ್ವೇಕ್ಷಣೆಗಳ ವರದಿಯಲ್ಲಿ ಉಲ್ಲೇಖವಿದೆ. ಅಲಹಾಬಾದ್‌ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಮೂರು ಸರ್ವೇಕ್ಷಣೆಗಳ ಪ್ರಮುಖಾಂಶಗಳನ್ನು ಉಲ್ಲೇಖಿಸಿದೆ. ಈ ವರದಿಗಳ ಮತ್ತು ಹೈಕೋರ್ಟ್‌ ಇವುಗಳಲ್ಲಿ ಪರಿಗಣಿಸಿದ ಅಂಶಗಳ ವಿವರ ಇಲ್ಲಿದೆ.

ಮೊದಲನೇ ಸರ್ವೇಕ್ಷಣೆ (1862–63ಸರ್ವೇಕ್ಷಣೆಯ ಅವಧಿ)

ADVERTISEMENT
ಅಲೆಕ್ಸಾಂಡರ್ ಕನ್ನಿಂಗ್‌ಹ್ಯಾಂ

ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್‌ಐ) ಸಂಸ್ಥೆಯನ್ನು ಸ್ಥಾಪಿಸಿದ ಬ್ರಿಟಿಷ್ ಅಧಿಕಾರಿ ಅಲೆಕ್ಸಾಂಡರ್ ಕನ್ನಿಂಗ್‌ಹ್ಯಾಂ ಅಯೋಧ್ಯೆಯ ಸರ್ವೇಕ್ಷಣೆ ನಡೆಸಿದ್ದಾನೆ. ಇದು ಮೊದಲ ಸರ್ವೇಕ್ಷಣೆ. ಅಯೋಧ್ಯೆಯನ್ನು ಈತ ‘ಅಜೂದಿಯಾ’ ಎಂದು ಕರೆದಿದ್ದಾನೆ.‘ಅಜೂದಿಯಾದಲ್ಲಿ ಹಲವು ದೇವಾಲಯಗಳಿವೆ. ಆದರೆ, ಇವು ಯಾವುವೂ ಪುರಾತನ ದೇವಾಲಯಗಳಲ್ಲ. ಮುಸ್ಲಿಮರು ಧ್ವಂಸ ಮಾಡಿದಪುರಾತನ ದೇವಾಲಯಗಳ ನಿವೇಶನಗಳಲ್ಲೇ ಈ ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಜೂದಿಯಾದಲ್ಲಿ ಇರುವ ‘ಲಕ್ಷ್ಮಣ್‌ ಘಾಟ್‌’ನ ಸಮೀಪದಲ್ಲಿ, ಲಕ್ಷ್ಮಣನ ಅಣ್ಣನಾದ ರಾಮನ ಜನ್ಮಸ್ಥಳವಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ದೇವಾಲಯವನ್ನು ಧ್ವಂಸ ಮಾಡಿ, ಮಸೀದಿ ನಿರ್ಮಿಸಲಾಗಿದೆ ಎಂದು ಆತ ತನ್ನ ವರದಿಯಲ್ಲಿ ಎಲ್ಲೂ ಹೇಳಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿತ್ತು.

ಹಲವು ಬಾರಿ ನಾಶವಾದ ನಗರ (1889–91 ಸರ್ವೇಕ್ಷಣೆಯ ಅವಧಿ)

ಎ.ಫ್ಯೂರರ್‌

ಅಂದಿನ ಎಎಸ್‌ಐ ಅಧಿಕಾರಿ ಎ.ಫ್ಯೂರರ್‌ ನೇತೃತ್ವದಲ್ಲಿ ನಡೆದ ಸರ್ವೇಕ್ಷಣೆಯ ವರದಿ ಇದು. ಅಯೋಧ್ಯೆಯನ್ನು ಈತನೂ ಅಜೂದಿಯಾ ಎಂದೇ ಕರೆದಿದ್ದಾನೆ. ರಾಮಾಯಣ ಕಾಲದ ಅಯೋಧ್ಯೆ ಬಹಳ ಹಿಂದೆಯೇ ನಾಶವಾಗಿದೆ. ಆನಂತರ ಕ್ರಿಸ್ತ ಪೂರ್ವ 1ನೇ ಶತಮಾನದಲ್ಲಿ ವಿಕ್ರಮಾದಿತ್ಯ ಮತ್ತೆ ಈ ನಗರವನ್ನು ನಿರ್ಮಿಸಿದ್ದಾನೆ. ಕಾಲಾನಂತರ ನಗರ ಮತ್ತೆ ನಾಶವಾಗಿದೆ. ನಗರದ ದಕ್ಷಿಣ ದಿಕ್ಕಿನಲ್ಲಿ ಪುರಾತನ ಮಂದಿರ ಸ್ವರೂಪದ ರಚನೆಗಳ ಅವಶೇಷಗಳಿವೆ. ಆದರೆ ನಗರದಲ್ಲಿರುವ ಜೈನ ಮತ್ತು ಬ್ರಾಹ್ಮಣ ಮಂದಿರಗಳೆಲ್ಲವೂ ತೀರಾ ಇತ್ತೀಚಿನವು ಎಂದು ಈತ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದಾನೆ.

ಬಾಬರಿ ಮಸೀದಿ ನಿರ್ಮಾಣ ಸಂಬಂಧ ಹೊರಡಿಸಲಾಗಿದ್ದ ಶಾಸನವುಬಾಬರಿ ಮಸೀದಿಯಲ್ಲಿ ಇದೆ ಎಂದೂ ಆತ ಹೇಳಿದ್ದಾನೆ. ‘1523ರಲ್ಲಿ ಮೀರ್ ಖಾನ್ ಈ ಮಸೀದಿಯನ್ನು ನಿರ್ಮಿಸಿದ’ ಎಂದು ಆತ ಹೇಳಿದ್ದಾನೆ. ಶಾಸನದ ಅಂಶವನ್ನು ಮಾತ್ರ ಅಲಹಾಬಾದ್ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.

‘ಮುಸ್ಲಿಮರು ಈ ಶಾಸನವನ್ನು ಆಧಾರವಾಗಿಟ್ಟುಕೊಂಡು ಮಸೀದಿ ಇರುವ ಜಾಗ ತಮ್ಮದು ಎಂದು ಹೇಳುತ್ತಿದ್ದಾರೆ. ಆದರೆ ಮೂಲ ಶಾಸನವು 1934ರ ಹಿಂದೂ–ಮುಸ್ಲಿಂ ಗಲಭೆಯಲ್ಲಿ ನಾಶವಾಗಿದೆ. ಅದೇ ಜಾಗದಲ್ಲಿ ಶಾಸನದ ಪ್ರತಿಯನ್ನು ಸ್ಥಾಪಿಸಲಾಗಿದೆ ಎಂದು ಮುಸ್ಲಿಮರು ಹೇಳುತ್ತಿದ್ದಾರೆ. ಈ ಶಾಸನ ಪ್ರತಿಯ ಅಧಿಕೃತತೆಯನ್ನು ಪ್ರಶ್ನಿಸಬೇಕಾಗುತ್ತದೆ. ಆದರೆ 1889ರಲ್ಲಿ ಎ.ಫ್ಯೂರರ್‌ನ ಅಯೋಧ್ಯೆ ಸರ್ವೇಕ್ಷಣಾ ವರದಿಯಲ್ಲಿ ಮೂಲ ಶಾಸನದ ಪಠ್ಯವನ್ನು ಉಲ್ಲೇಖಿಸಲಾಗಿದೆ’ ಎಂದು ತೀರ್ಪಿನಲ್ಲಿ ವಿವರಿಸಲಾಗಿತ್ತು.

ಬೌದ್ಧ ಧರ್ಮದ ಪ್ರಭಾವ
* 1969–70ರ ಅವಧಿಯಲ್ಲಿ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಅವಧ್ ಕಿಶೋರ್ ನಾರಾಯಣ್ ಅವರ ತಂಡವು ಅಯೋಧ್ಯೆ ನಗರದ ಸರ್ವೇಕ್ಷಣೆ ನಡೆಸಿತ್ತು. ಈ ನಗರವು ಕ್ರಿಸ್ತಪೂರ್ವ 17ನೇ ಶತಮಾನದಷ್ಟು ಹಳೆಯದ್ದು ಎಂದು ಈ ತಂಡ ಹೇಳಿತ್ತು. ಅಲ್ಲದೆ ಅಯೋಧ್ಯೆಯಲ್ಲಿ ಬೌದ್ಧ ಧರ್ಮದ ಭಾರಿ ಪ್ರಭಾವವಿತ್ತು ಎಂದು ವರದಿಯಲ್ಲಿ ವಿವರಿಸಲಾಗಿತ್ತು
* 1992ರ ಜುಲೈನಲ್ಲಿಡಾ.ವೈ.ಡಿ.ಶರ್ಮಾ ಮತ್ತು ಡಾ.ಕೆ.ಎಂ ಶ್ರೀವಾಸ್ತವ ಅವರ ನೇತೃತ್ವದ ತಂಡವು ಸರ್ವೇಕ್ಷಣೆ ನಡೆಸಿತ್ತು. ವಿವಾದಿತ ನಿವೇಶನದ ಬಳಿ ದೊರೆತ ಶಿಲ್ಪಗಳು ವೈಷ್ಣವ ಪಂಥಕ್ಕೆ ಸೇರಿವೆ. ಕೆಲವು ಶಿಲ್ಪಗಳು ಶಿವ–ಪಾರ್ವತಿಯದ್ದಾಗಿವೆ. ಇವು ನಾಗರ ಶೈಲಿಯ ಕೆತ್ತನೆಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು
* ಈ ಎರಡೂ ಸರ್ವೇಕ್ಷಣಾ ವರದಿಗಳನ್ನು ಅಲಹಾಬಾದ್ ಹೈಕೋರ್ಟ್‌ ವಿಚಾರಣೆಗೆ ಪರಿಗಣಿಸಿಲ್ಲ
* ಎಎಸ್‌ಐನ ನಿವೃತ್ತ ಅಧಿಕಾರಿ 1976–77ರ ಅವಧಿಯಲ್ಲಿ ಅಯೋಧ್ಯೆಯಲ್ಲಿ ಸರ್ವೇಕ್ಷಣೆ ನಡೆಸಿದ್ದರು. ಈ ಸರ್ವೇಕ್ಷಣೆ ಪೂರ್ಣಗೊಳ್ಳುವ ಮುನ್ನವೇ ಅದನ್ನು ನಿಲ್ಲಿಸಲಾಗಿತ್ತು

ವಿವಾದಿತ ನಿವೇಶನದಲ್ಲಿ ಪುರಾತನ ಕಟ್ಟಡದ ಅವಶೇಷ

2003ಸರ್ವೇಕ್ಷಣೆ ಮತ್ತು ಉತ್ಖನನ ಅವಧಿ


ನ್ಯಾಯಾಲಯದ ಆದೇಶದ ಮೇರೆಗೆ 2003ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ಬಾಬರಿ ಮಸೀದಿ ಇದ್ದ ಜಾಗ ಮತ್ತು ಸುತ್ತಮುತ್ತಲಿನ ಜಾಗದಲ್ಲಿ ಉತ್ಖನನ ನಡೆಸಿತು. ‘ವಿವಾದಿತ ನಿವೇಶನದಲ್ಲಿ ಮೇಲ್ಮೈ ಕೆಳಗೆ ಇರುವ ಜಾಗದಲ್ಲಿ ಉತ್ಖನನ ನಡೆಸಿ, ಈ ಹಿಂದೆ ಅಲ್ಲಿ ದೇವಾಲಯ ಇತ್ತು ಎಂಬುದಕ್ಕೆ ಸಂಬಂಧಿಸಿದ ಪುರಾವೆಗಳು ಲಭಿಸುತ್ತವೆಯೇ ಎಂಬುದನ್ನು ಗಮನಿಸಿ’ ಎಂದು ನ್ಯಾಯಾಲಯ ಹೇಳಿತ್ತು. ಸರ್ವೇಕ್ಷಣಾ ಸಂಸ್ಥೆಯು, ಉತ್ಖನನದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.

‘ಪುರಾತನ ದೇವಾಲಯಕ್ಕೆ ಸಂಬಂಧಿಸಿದ ಹಲವು ಅವಶೇಷಗಳು ಉತ್ಖನನದ ವೇಳೆ ಪತ್ತೆಯಾಗಿವೆ.ವಿವಾದಿತ ನಿವೇಶನದಲ್ಲಿ ಇದ್ದ ಅವಶೇಷಗಳು ಪುರಾತನ ಕಟ್ಟಡಕ್ಕೆ ಸಂಬಂಧಿಸಿದಸ್ತಂಭಗಳು, ಅಡಿಪಾಯದ ಗೋಡೆಗಳು, ನೆಲಹಾಸು ಎಂಬುದನ್ನು ಉತ್ಖನನವು ದೃಢಪಡಿಸುತ್ತದೆ. 10ನೇ ಶತಮಾನದಿಂದ ಈವರೆಗೆ ಹಲವು ಬಾರಿ ಇಲ್ಲಿ ನಿರ್ಮಾಣ ಕಾರ್ಯ ನಡೆದಿದೆ. ಉತ್ಖನನಕ್ಕೆ ಆಯ್ಕೆ ಮಾಡಿಕೊಂಡ ನಿವೇಶನದ ಕೆಳಭಾಗವು ಹಲವು ಹಂತಗಳನ್ನು ಒಳಗೊಂಡಿದೆ.50 ಸ್ತಂಭಗಳ ಅಡಿಪಾಯಗಳು, ಸುಟ್ಟ ಇಟ್ಟಿಗೆಯ ಕಿರುಗೋಡೆಗಳು, ದೇವ ದೇವತೆಯರ ಶಿಲ್ಪಗಳು, ಕಮಲದ ಹೂವಿನ ರಚನೆಗಳು ಪತ್ತೆಯಾಗಿವೆ. ಇವೆಲ್ಲವೂ ಭಾರಿ ಕಟ್ಟಡವೊಂದರ ಭಾಗಗಳಾಗಿದ್ದು, ಈ ಕಟ್ಟಡದ ವಿನ್ಯಾಸವು ಉತ್ತರ ಭಾರತದ ದೇವಾಲಯಗಳ ವಿನ್ಯಾಸವನ್ನು ಹೋಲುತ್ತದೆ’ ಎಂದು ಸರ್ವೇಕ್ಷಣಾ ವರದಿಯಲ್ಲಿ ವಿವರಿಸಲಾಗಿತ್ತು.

‘ಈವರೆಗಿನ ಐತಿಹಾಸಿಕ ದಾಖಲೆಗಳು, ಶಾಸನಗಳು ಮತ್ತು ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖವಾಗಿರುವ ಮಾಹಿತಿಗಿಂತ ವ್ಯತಿರಿಕ್ತವಾದ ಮಾಹಿತಿಯನ್ನು 2003ರ ಸರ್ವೇಕ್ಷಣಾ ವರದಿ ನೀಡುತ್ತಿದೆ. ಪ್ರಕರಣವನ್ನು ಇತ್ಯರ್ಥಪಡಿಸಲು ಈ ವರದಿಯಿಂದ ಏನೂ ಉಪಯೋಗವಿಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ದೇವಾಲಯ ಒಡೆದಿಲ್ಲ


‘ಮಸೀದಿ ಕಟ್ಟುವ ಉದ್ದೇಶದಿಂದ ಈ ನಿವೇಶನದಲ್ಲಿ ಯಾವುದೇ ದೇವಾಲಯಗಳನ್ನು ಒಡೆದಿಲ್ಲ. ಅಲ್ಲದೆ ಈ ಮೊದಲೇ ದೇವಾಲಯಗಳು ನಾಮಾವಶೇಷಾಗಿ ಉಳಿದಿದ್ದ ನಿವೇಶನದಲ್ಲಿ ಮಸೀದಿ ನಿರ್ಮಿಸಲಾಗಿತ್ತು. ದೇವಾಲಯದ ಅವಶೇಷಗಳನ್ನು ಮಸೀದಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.