ನವದೆಹಲಿ: ಭಾರತೀಯ ಪುರಾತತ್ವ ಇಲಾಖೆಯ ಆಡಳಿತಕ್ಕೆ ಒಳಪಟ್ಟಿರುವ ಎಲ್ಲಾ ಐತಿಹಾಸಿಕ ಸ್ಥಳಗಳಲ್ಲಿ ಜುಲೈ 6 ರಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಕೇಂದ್ರ ಸಂಸ್ಕೃತಿ ಮತ್ತು ಪುರಾತತ್ವ ಇಲಾಖೆ ಸಚಿವ ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ.
ಜುಲೈ 6 ರಿಂದ ಆರೋಗ್ಯ ಸಚಿವಾಲಯ ಹಾಗೂ ಕೇಂದ್ರ ಗೃಹ ಇಲಾಖೆಯು ಜಾರಿಗೆ ತಂದಿರುವ ಕಟ್ಟುನಿಟ್ಟಿನ ನಿಯಮಗಳನ್ನು ಅಳಪಡಿಸಿಕೊಂಡು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ. ಮಾರ್ಚ್ 17ರಿಂದ ಕೊರೊನಾ ಸೋಂಕು ಹೆಚ್ಚಾಗುವ ಭೀತಿಯಿಂದ ರಾಷ್ಟ್ರದ 3,691 ಐತಿಹಾಸಿಕ ಸ್ಥಳಗಳನ್ನು ಬಂದ್ ಮಾಡಿ ಸಾರ್ವಜನಿಕರ ವೀಕ್ಷಣೆಯನ್ನು ನಿರ್ಬಂಧಿಸಲಾಗಿತ್ತು.
ಜೂನ್ ತಿಂಗಳ ಆರಂಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ದೇಶದ 820 ಐತಿಹಾಸಿಕ ಸ್ಮಾರಕಗಳನ್ನು ತಾತ್ಕಾಲಿಕವಾಗಿ ತೆರೆಯಲಾಗಿತ್ತು. ಕೊರೊನಾ ಸೋಂಕು ಹರಡುವ ಭೀತಿಯಿಂದ ಮತ್ತೆ ಎಲ್ಲಾ ಸ್ಥಳಗಳನ್ನು ಬಂದ್ ಮಾಡಿ ಸಾರ್ವಜನಿಕರ ಪ್ರವೇಶವನ್ನು
ನಿರ್ಬಂಧಿಸಲಾಗಿತ್ತು. ಪ್ರಸ್ತುತ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಸ್ಥಳಗಳನ್ನು ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ವೀಕ್ಷಣೆಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಇದರೊಂದಿಗೆ ಆರೋಗ್ಯ ಇಲಾಖೆ ಹಾಗೂ ಗೃಹ ಇಲಾಖೆ ಜಾರಿಗೆ ತಂದಿರುವ ಎಲ್ಲಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.