ADVERTISEMENT

ಭೋಜಶಾಲಾ: ಸಮೀಕ್ಷೆ ಆರಂಭಿಸಿದ ಎಎಸ್‌ಐ

ಪಿಟಿಐ
Published 22 ಮಾರ್ಚ್ 2024, 14:02 IST
Last Updated 22 ಮಾರ್ಚ್ 2024, 14:02 IST
   

ಧಾರ್‌: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ತಂಡವೊಂದು ಇಲ್ಲಿನ ವಿವಾದಿತ ಭೋಜಶಾಲಾ/ ಕಮಲ್‌ ಮೌಲಾ ಮಸೀದಿ ಸಂಕೀರ್ಣದಲ್ಲಿ ಶುಕ್ರವಾರ ಸಮೀಕ್ಷೆ ಆರಂಭಿಸಿತು.

15 ಸದಸ್ಯರನ್ನು ಒಳಗೊಂಡಿದ್ದ ತಂಡವು ಬೆಳಿಗ್ಗೆ ಮಸೀದಿ ಸಂಕೀರ್ಣಕ್ಕೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್‌ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಇದ್ದರು.

‘ಭೋಜಶಾಲಾದಲ್ಲಿ ಸಮೀಕ್ಷೆ ಆರಂಭವಾಗಿದೆ. ಎಎಸ್‌ಐ ತಂಡಕ್ಕೆ ಅಗತ್ಯವಿರುವ ಎಲ್ಲ ಬೆಂಬಲ ನೀಡುತ್ತೇವೆ. ರಕ್ಷಣೆಗೆ ಭದ್ರತೆಯನ್ನೂ ಒದಗಿಸಲಾಗಿದೆ. ನಗರದಲ್ಲಿ ಶಾಂತಿಯುತ ವಾತಾವರಣ ಇದೆ’ ಎಂದು ಧಾರ್‌ ಪೊಲೀಸ್‌ ವರಿಷ್ಠಾಧಿಕಾರಿ ಮನೋಜ್‌ ಕುಮಾರ್ ಸಿಂಗ್‌ ತಿಳಿಸಿದರು.

ADVERTISEMENT

ಸ್ಥಳದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಇದೆಯೇ ಎಂಬ ಪ್ರಶ್ನೆಗೆ, ‘ಮಂಗಳವಾರ ‘ಪೂಜೆ’, ಶುಕ್ರವಾರ ‘ನಮಾಜ್‌’ ಎಂದಿನಂತೆ ನಡೆಯುತ್ತದೆ. ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಲು ಅಗತ್ಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಎಎಸ್‌ಐ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.

‘15 ಜನರ ತಂಡವು ಸಮೀಕ್ಷೆಗೆ ತಳಮಟ್ಟದ ಸಿದ್ಧತೆ ಮಾಡಿಕೊಂಡಿತು. ಜಿಪಿಎಸ್‌, ಕಾರ್ಬನ್‌ ಡೇಟಿಂಗ್‌ ಸಾಧನಗಳು ಸೇರಿದಂತೆ ನೂತನ ತಂತ್ರಜ್ಞಾನವನ್ನು ತಂಡವು ಬಳಸಿಕೊಳ್ಳಲಿದೆ’ ಎಂದು ಅರ್ಜಿದಾರರಾದ ಆಶಿಶ್‌ ಗೋಯಲ್‌ ತಿಳಿಸಿದರು.

‘ಸಮೀಕ್ಷೆ ವೇಳೆ ಮುಸ್ಲಿಂ ಸಮುದಾಯದವರು ಭಾಗಿಯಾಗಿರಲಿಲ್ಲ. ಆದರೆ ಶುಕ್ರವಾರವಾದ ಕಾರಣ ಸ್ಥಳದಲ್ಲಿ ಎಂದಿನಂತೆ ನಮಾಜ್‌ ಸಲ್ಲಿಸಿದರು’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು.

ಭೋಜಶಾಲಾ ಸಂಕೀರ್ಣದಲ್ಲಿ ಆರು ವಾರಗಳ ಒಳಗಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಮಾ.11ರಂದು ಎಎಸ್‌ಐಗೆ ನಿರ್ದೇಶನ ನೀಡಿತ್ತು.

ಎಎಸ್‌ಐ ಸಂರಕ್ಷಿಸುತ್ತಿರುವ ಮಧ್ಯಕಾಲೀನ ಯುಗದ ಭೋಜಶಾಲಾ ಸ್ಮಾರಕವು ವಾಗ್ದೇವಿ (ಸರಸ್ವತಿ) ದೇವಸ್ಥಾನವಾಗಿತ್ತು ಎಂದು ಹಿಂದೂಗಳು ಪ್ರತಿಪಾದಿಸಿದ್ದಾರೆ. ಇದು, ಕಮಲ್‌ ಮೌಲಾ ಮಸೀದಿಯಾಗಿತ್ತು ಎಂದು ಮುಸಲ್ಮಾನರು ಪ್ರತಿವಾದ ಮಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.