ಧಾರ್, ಮಧ್ಯಪ್ರದೇಶ: ಭಾರತೀಯ ಪುರಾತತ್ವ ಇಲಾಖೆಯ ತಂಡವು ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲ / ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆ ಪ್ರಾರಂಭಿಸಿದೆ.
12ಕ್ಕೂ ಅಧಿಕ ಮಂದಿಯ ಪುರಾತತ್ವ ಇಲಾಖೆಯ ತಂಡವು ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿತು. ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಅವರಿಗೆ ಸಾಥ್ ನೀಡಿದರು.
‘ಭೋಜಶಾಲದಲ್ಲಿ ಸಮೀಕ್ಷೆ ಆರಂಭವಾಗಿದೆ. ಸಮೀಕ್ಷೆ ನಡೆಸಲು ಪುರಾತತ್ವ ಇಲಾಖೆಗೆ ಬೇಕಾದ ಎಲ್ಲಾ ಸಹಕಾರವನ್ನು ನಾವು ನೀಡಿದ್ದೇವೆ. ಸ್ಥಳದಲ್ಲಿ ಶಾಂತಿ ಭಂಗವಾಗದಂತೆ ಅಗತ್ಯ ಭದ್ರತೆಯನ್ನೂ ಕಲ್ಪಿಸಲಾಗಿದೆ’ ಎಂದು ಧಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸಿಂಗ್ ಪಿಟಿಐಗೆ ತಿಳಿಸಿದರು.
ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ಆರು ವಾರದೊಳಗೆ ಭೋಜಶಾಲ ಅವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಮಾರ್ಚ್ 11ರಂದು ಮಧ್ಯ ಪ್ರದೇಶ ಹೈಕೋರ್ಟ್ ಆದೇಶಿಸಿತ್ತು.
ಮಧ್ಯಯುಗದ ಈ ಸ್ಮಾರಕವು ವಾಗ್ದೇವಿಯ (ಸರಸ್ವತಿ) ದೇಗುಲ ಎಂದು ಹಿಂದೂಗಳು ನಂಬಿದರೆ, ಮುಸಲ್ಮಾನರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.
ಸಂಕೀರ್ಣದಲ್ಲಿ ಪ್ರತಿ ಮಂಗಳವಾರ ಪೂಜೆ ಸಲ್ಲಿಸಲು ಹಿಂದೂಗಳಿಗೂ, ಪ್ರತಿ ಶುಕ್ರವಾರ ನಮಾಜ್ ನಿರ್ವಹಿಸಲು ಮುಸಲ್ಮಾನರಿಗೂ ಅವಕಾಶ ನೀಡಿ 2003ರ ಏಪ್ರಿಲ್ 7ರಂದು ಪುರಾತತ್ವ ಇಲಾಖೆ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.