ADVERTISEMENT

ಟಿಎಂಸಿ– ಚುನಾವಣಾ ಆಯೋಗದ ಮಧ್ಯೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 0:25 IST
Last Updated 12 ನವೆಂಬರ್ 2024, 0:25 IST
   

ನವದೆಹಲಿ: ಪಶ್ಚಿಮ ಬಂಗಾಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಕೆಲವೇ ಗಂಟೆಗಳ ಮೊದಲು ಸೋಮವಾರ, ಟಿಎಂಸಿ ಮತ್ತು ಚುನಾವಣಾ ಆಯೋಗದ ಮಧ್ಯೆ ವಾಗ್ವಾದ ನಡೆಯಿತು.

ಪಕ್ಷವು ನೀಡಿರುವ ದೂರುಗಳ ಬಗ್ಗೆ ಆಯೋಗವು ಕ್ರಮ ಕೈಗೊಂಡಿಲ್ಲ ಎಂದು ಟಿಎಂಸಿ ಆರೋಪಿಸಿತ್ತು. ಆಯೋಗವು ಈ ಆರೋಪವನ್ನು  ಅಲ್ಲಗಳೆದು, ಭೇಟಿಗೆ ಅವಕಾಶ ನೀಡುವಂತೆ ಟಿಎಂಸಿ ಬರೆದಿದ್ದ ಪತ್ರದಲ್ಲಿ ಹೆಚ್ಚಿನ ವಿವರಗಳು ಇರಲಿಲ್ಲ ಎಂದು ಹೇಳಿದೆ.

ಇದಕ್ಕೆ ಪ್ರತಿಯಾಗಿ ಟಿಎಂಸಿ ಹಿರಿಯ ಸಂಸದ  ಡೆರಿಕ್‌ ಒಬ್ರಯಾನ್‌ ಅವರು ಚುನಾವಣಾ ಆಯೋಗಕ್ಕೆ ಮತ್ತೆ ಪತ್ರ ಬರೆದು, ‘ಚುನಾವಣಾ ಆಯೋಗದ ಬಗ್ಗೆ ಅಪಾರ ಗೌರವವಿದೆ. ಆದರೆ ಸಂಸತ್ತಿಗೆ ಮೂರನೇ ಅತಿ ಹೆಚ್ಚು ಸಂಸದರನ್ನು ಕಳು ಹಿಸಿರುವ ಪಕ್ಷದ ಬಗ್ಗೆ ಆಯೋಗಕ್ಕೆ ಎಷ್ಟು ಗೌರವ ಇದೆ ಎಂಬುದನ್ನು ಮೂರು ದಿನಗ ಳಲ್ಲಿ ಕಂಡಿದ್ದೇವೆ’ ಎಂದು ಹೇಳಿದ್ದಾರೆ.

ADVERTISEMENT

‘ಮೂರು ದಿನ ನಮ್ಮನ್ನು ಉಪೇಕ್ಷಿಸಿ ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಳ್ಳುವ 90 ನಿಮಿಷ ಮೊದಲು ಭೇಟಿಗೆ ಅವಕಾಶ ನೀಡಲಾಗಿದೆ’ ಎಂದು ದೂರಿದ್ದಾರೆ.

ಒಬ್ರಯಾನ್‌ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಆಯೋಗ, ‘ಮನವಿ ಸ್ವೀಕರಿಸಿದ 20 ಗಂಟೆಗಳ ಒಳಗಾಗಿ ಕ್ರಮ ಕೈಗೊಂಡಿದ್ದರೂ ಇಂಥ ಹೇಳಿಕೆ ನೀಡುತ್ತಿರುವುದು ಅಚ್ಚರಿ ಮೂಡಿಸಿದೆ’ ಎಂದು ಹೇಳಿದೆ.

‘ಕ್ರಮ ಕೈಗೊಂಡಿಲ್ಲ ಎಂಬ ಆರೋಪವು ಆಧಾರರಹಿತ. ಹಾಗೆಯೇ ಸೋಮವಾರ ಮಧ್ಯಾಹ್ನ 3.30ಕ್ಕೆ ನಿಯೋಗವು ಭೇಟಿ ಮಾಡಬಹುದು ಎಂದು ನವೆಂಬರ್‌ 10ರಂದೇ ತಿಳಿಸಲಾಗಿದೆ’ ಎಂದು ಹೇಳಿದೆ.

ಹಲವು ವಿಚಾರಗಳ ಬಗ್ಗೆ ವಿವರಣೆ ನೀಡಲು ಶನಿವಾರ ಆಯೋಗದ ಸಮಯವನ್ನು  ಕೋರಿದ್ದೆವು. ಆದರೆ ಆ ದಿನ ಸಮಯ ನೀಡಲಿಲ್ಲ ಎಂದು ಟಿಎಂಸಿ ನಾಯಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.