ನವದೆಹಲಿ: ಅಮಾನತುಗೊಂಡಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಹಾಗೂ ಆತನ ಬೆಂಬಲಿಗರು ಇ.ಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಪ್ರಕರಣ ಸಂಬಂಧ ಸಿಬಿಐ ಶುಕ್ರವಾರ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಈ ವೇಳೆ ವಿದೇಶಿ ನಿರ್ಮಿತ ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಶೇಖ್ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಜನವರಿ 5ರಂದು ಶೋಧ ಕೈಗೊಂಡಿದ್ದರು. ಆ ವೇಳೆ ಶೇಖ್ ಬೆಂಬಲಿಗರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಮೂವರು ಅಧಿಕಾರಿಗಳು ಗಾಯಗೊಂಡಿದ್ದರು.
ಪ್ರಕರಣ ಸಂಬಂಧ ಶುಕ್ರವಾರ ಬೆಳಗ್ಗೆ ಸಿಬಿಐ ತಂಡ ಶೋಧ ಕಾರ್ಯಾಚರಣೆ ಆರಂಭಿಸಿದೆ. ವಿದೇಶಿ ನಿರ್ಮಿತ ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ಜನವರಿ 5 ರಂದು ಘಟನೆಗಳಿಗೆ ಸಂಬಂಧಿಸಿದ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದೆ.
ಇ.ಡಿ ಅಧಿಕಾರಿಗಳ ಮೇಲಿನ ದಾಳಿಯ ಕುರಿತು ನಜತ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ದಾಳಿಗೆ ಸಂಬಂಧಿಸಿದಂತೆ ಶೇಖ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಫೆಬ್ರುವರಿ 29 ರಂದು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.