ಕೋಲ್ಕತ್ತ: ಅಂಪನ್ ಚಂಡಮಾರುತದಿಂದ ಸಾಕಷ್ಟು ಹಾನಿಗೊಳಗಾಗಿರುವ ಕೋಲ್ಕತ್ತ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಸೇವೆ ಒದಗಿಸಲು ಶನಿವಾರ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕೋಲ್ಕತ್ತ ನಗರ, ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ತಲಾ 35 ಯೋಧರಿರುವ ಐದು ತಂಡಗಳನ್ನು ನಿಯೋಜಿಸಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರೊಬ್ಬರು ತಿಳಿಸಿದ್ದಾರೆ. ಚಂಡಮಾರುತದಿಂದಾಗಿ ಈ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಪಶ್ಚಿಮ ಬಂಗಾಳ ಸರ್ಕಾರವು ಸೇನೆಯ ಸಹಾಯ ಕೋರಿದ ಬೆನ್ನಲ್ಲೇ ಸೇನೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
’ಕೋಲ್ಕತ್ತ ನಗರ ಆಡಳಿತಕ್ಕೆ ಸಹಾಯಕ್ಕೆ ಸೇನೆಯ ಮೂರು ತಂಡ ನೀಡಲಾಗಿದೆ. ರಸ್ತೆ ಪುನರ್‌ನಿರ್ಮಾಣ, ಮರಗಳ ತೆರವಿಗೆ ಬೇಕಾದಂತಹ ಉಪಕರಣಗಳನ್ನು ಹೊಂದಿರುವ ತಂಡಗಳನ್ನು ಟಾಲಿಗಂಜ್, ಬಾಲಿಗಂಜ್ ಹಾಗೂ ದಕ್ಷಿಣ ಕೋಲ್ಕತ್ತದ ಬೆಹ್ಲಾಗೆ ನಿಯೋಜಿಸಲಾಗಿದೆ’ ಎಂದು ವಕ್ತಾರರು ತಿಳಿಸಿದರು.
ಜನರಿಗೆ ಅಗತ್ಯ ಸೇವೆ: ಅಗತ್ಯ ಸೇವೆಗಳನ್ನು ತ್ವರಿತವಾಗಿ ಜನರಿಗೆ ತಲುಪಿಸಲು ಎಲ್ಲ ರೀತಿಯ ಸಜ್ಜು ಮಾಡಿಕೊಂಡಿರುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ. ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆಯ ದುರಸ್ತಿಗೆ ಆದ್ಯತೆ ನೀಡಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನೇಮಕ ಮಾಡಿಕೊಂಡು, ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.