ಪುಣೆ: ‘ಜೇಮ್ಸ್‌ಬಾಂಡ್ ಸಿನಿಮಾದಂತೆ ಗುಪ್ತಚರ ಜಗತ್ತು ಮೋಹಕವಾಗಿರುವುದಿಲ್ಲ. ಅದು ಜಾನ್ ಲೀ ಕಾರಿ ಅವರ ಕಾದಂಬರಿ ‘ಸ್ಮೈಲಿ’ಗಿಂತ ತುಸು ಹೆಚ್ಚಿರುತ್ತದೆ’ ಎಂದು ಸೇನಾಪಡೆ ನಿಯೋಜಿತ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಾಣೆ ಹೇಳಿದರು.
ಪತ್ರಕರ್ತ ನಿತಿನ್ ಗೋಖಲೆ ಅವರ ‘ಆರ್.ಎನ್. ಕಾವೊ: ಜಂಟಲ್‌ಮೆನ್ ಸ್ಪೈ ಮಾಸ್ಟರ್’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಸೇನಾ ಕಾರ್ಯಾಚರಣೆ ಮತ್ತು ಗುಪ್ತಚರ ಒಂದಕ್ಕೊಂದು ಬೆಸೆದು ಕೊಂಡಿರುತ್ತದೆ. ಕಾರ್ಯಾಚಾರಣೆ ಕುರಿತ ಮಾತುಕತೆ ಶುರುವಾಗುವುದೇ, ‘ಶತ್ರುಗಳ ಬಗ್ಗೆ ಸುದ್ದಿ’ ಎಂಬುದರಿಂದ ಮತ್ತು ಆ ‘ಸುದ್ದಿ’ ಎನ್ನುವುದು ಗುಪ್ತಚರರಿಂದ ನಮಗೆ ಸಿಕ್ಕಿರುವ ಮಾಹಿತಿಯಾಗಿರುತ್ತದೆ’ ಎಂದು ವಿವರಿಸಿದರು.
‘ಸಂಶೋಧನೆ ಮತ್ತು ವಿಶ್ಲೇಷಣೆ ತಂಡವೂ ಸೇರಿದಂತೆ ವಿವಿಧ ಗುಪ್ತಚರ ಸಂಸ್ಥೆಗಳ ಬೆಂಬಲವಿಲ್ಲದೆ ನಮ್ಮ ಯಾವುದೇ ಸೇನಾ ಕಾರ್ಯಾಚರಣೆ ಯಶಸ್ವಿಯಾಗುತ್ತಿರಲಿಲ್ಲ ಎಂದು ನಾನು ಧೈರ್ಯವಾಗಿ ಹೇಳುತ್ತೇನೆ. ರಾಷ್ಟ್ರೀಯ ಭದ್ರತೆಗೆ ಗುಪ್ತಚರ ಸಂಸ್ಥೆಗಳ ಕೊಡುಗೆಗೆ ಸಶಸ್ತ್ರ ಪಡೆ ಗೌರವ ಸಲ್ಲಿಸುತ್ತದೆ’ ಎಂದರು.
‘ನಾವು ಗುಪ್ತಚರ ಕುರಿತು ಮಾತನಾಡುವಾಗ ಅಥವಾ ಯೋಚಿಸುವಾಗ, ಸಾಮಾನ್ಯವಾಗಿ ನಾವು ನೋಡಿದ ಜೇಮ್ಸ್‌ಬಾಂಡ್ ಸಿನಿಮಾಗಳು, ಅದರಲ್ಲಿನ ಬಂದೂಕಗಳು, ಬೆಡಗಿರು, ಗಿಟಾರ್ ಮತ್ತು ಮೋಹಕತೆಯ ಬಗ್ಗೆಯೇ ಆಲೋಚಿಸುತ್ತೇವೆ. ಆದರೆ, ಗುಪ್ತಚರ ಜಗತ್ತು ಹಾಗಿರುವುದಿಲ್ಲ. ಜಾನ್ ಲಿ ಕಾರಿ ಅವರ ಪತ್ತೆದಾರಿ ಕಾದಂಬರಿ ‘ಸ್ಮೈಲಿ’ಗಿಂತ ತುಸು ಹೆಚ್ಚಾಗಿರುತ್ತದೆ. ಕಾಣದ, ಕೇಳದ, ಅಜ್ಞಾತ, ತೆರೆಮರೆಯಲ್ಲಿ ಕೆಲಸ ಮಾಡುವುದು, ಮಾಹಿತಿಯ ಪರಿಮಾಣವನ್ನು ವಿಶ್ಲೇಷಿಸುವುದು.. ಹೀಗೆ ಸಿನಿಮಾ, ಕಾದಂಬರಿ ಚಿತ್ರಣಕ್ಕಿಂತ ಭಿನ್ನವಾಗಿರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.