ADVERTISEMENT

ದೇಶೀಯ ಯುದ್ಧ ವಿಮಾನ ‘ತೇಜಸ್‌’ ಏರಿದ ಸೇನಾ ಮುಖ್ಯಸ್ಥ 

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:25 IST
Last Updated 21 ಫೆಬ್ರುವರಿ 2019, 19:25 IST
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾದಲ್ಲಿ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ತೇಜಸ್‌ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು -ಪ್ರಜಾವಾಣಿ ಚಿತ್ರ/ಕೃಷ್ಣ ಕುಮಾರ್
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾದಲ್ಲಿ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ತೇಜಸ್‌ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು -ಪ್ರಜಾವಾಣಿ ಚಿತ್ರ/ಕೃಷ್ಣ ಕುಮಾರ್   

ಬೆಂಗಳೂರು: ಪ್ರಥಮ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (ಎಲ್‌ಸಿಎ) ‘ತೇಜಸ್‌’ ಗುರುವಾರ ವಿಶೇಷ ಅತಿಥಿಯನ್ನು ಹೊತ್ತು ಹಾರಾಟ ನಡೆಸಿತು.

ಆ ಅತಿಥಿ ಬೇರೆ ಯಾರೂ ಅಲ್ಲ, ಭೂಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌. ‘ತೇಜಸ್‌’ ಸೇನೆಯ ತರಬೇತಿ ಬಳಕೆಗೆ ಅರ್ಹತೆ ಪಡೆದಿದೆ ಎಂಬ ಪ್ರಮಾಣ ಪತ್ರ ಪಡೆದ ದಿನವೇ ರಾವತ್‌ ಯಲಹಂಕದ ವಾಯು ನೆಲೆಯಲ್ಲಿ ಹಾರಾಟ ನಡೆಸಿದ್ದು ವಿಶೇಷ.

ಬಿಪಿನ್ ರಾವತ್ ಅವರು ದೇಶಿ ನಿರ್ಮಿತ ಯುದ್ಧ ವಿಮಾನವೊಂದರಲ್ಲಿ ಹಾರಾಟ ನಡೆಸಿದ್ದೂ ಇದೇ ಮೊದಲು. ‘ತೇಜಸ್‌’ ಶಬ್ದಾತೀತ ವೇಗ ಹೊಂದಿದ್ದು, ಹಗುರ ಮತ್ತು ಬಹುಪಯೋಗಿ ಯುದ್ಧ ವಿಮಾನ. 30 ನಿಮಿಷಗಳ ಹಾರಾಟದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರಾವತ್‌, ‘ಇದೊಂದು ಅತ್ಯುತ್ತಮ ಯುದ್ಧ ವಿಮಾನ.

ADVERTISEMENT

ಇದರಲ್ಲಿ ಹಾರಾಟ ನಡೆಸಿ ಅನುಭವ ಪಡೆಯಲು ಕಾರಣರಾದ ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾ ಅವರನ್ನು ಅಭಿನಂದಿಸುತ್ತೇನೆ. ಅಪಾರ ಸಾಮರ್ಥ್ಯ ಇದ್ದರೂ ಹಾರಾಟದ ವೇಳೆ ಸಾಮಾನ್ಯ ಹಾರಾಟದ ಕೌಶಲ ಪ್ರದರ್ಶಿಸಲಾಯಿತು. ಎಲ್‌ಸಿಎಯ ಗುರಿ ಇಡುವ ವ್ಯವಸ್ಥೆಯಂತೂ ಅತ್ಯುತ್ತಮವಾಗಿದೆ’ ಎಂದು ಶ್ಲಾಘಿಸಿದರು.

ಅಂತಿಮ ಕಾರ್ಯಾಚರಣೆ ಅನುಮತಿ:ತೇಜಸ್‌ ಯುದ್ಧ ವಿಮಾನ ಅಸ್ತ್ರಗಳನ್ನು ಬಳಸಿ ಕಾರ್ಯಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ ಎಂಬ ಅಂತಿಮ ಅನುಮತಿಯ ಪ್ರಮಾಣ ಪತ್ರವನ್ನು ಗುರುವಾರ ಪಡೆಯಿತು.

ಸೇನಾ ವೈಮಾನಿಕ ಕ್ಷಮತೆ ಮತ್ತು ಪ್ರಮಾಣೀಕರಣ ನೀಡುವ ಸಿಇಎಂಐಎಲ್‌ಎಸಿಯು ಗುರುವಾರ ಏರ್‌ಚೀಫ್‌ ಮಾರ್ಷಲ್‌ ಬೀರೇಂದ್ರ ಸಿಂಗ್‌ ಧನೋವಾ ಅವರಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಿತು.

ಈ ವಿಮಾನ ಜನರಲ್ ಎಲೆಕ್ಟ್ರಿಕ್ ’ಎಫ್ 144’ ಎಂಜಿನ್ ಹೊಂದಿದ್ದು ಮಿಗ್ 21 ಯುದ್ಧ ವಿಮಾನಕ್ಕೆ ಪರ್ಯಾಯ ಎಂದು ಪರಿಗಣಿಸಲಾಗಿದೆ. ಎರಡು ಆಸನಗಳ ತರಬೇತಿ ಉದ್ದೇಶದ ವಿಮಾನವಾಗಿದೆ.

**

ಲಘು ಯುದ್ಧವಿಮಾನ ತೇಜಸ್‌ನಲ್ಲಿ ನಡೆಸಿದ ಹಾರಾಟ ಜೀವಮಾನದ ಅನುಭವ. ಇದೊಂದು ಅದ್ಭುತ ವಿಮಾನ ಹಾಗೂ ಇದರ ಗುರಿಯೂ ಅತ್ಯುತ್ತಮ.

–ಬಿಪಿನ್ ರಾವತ್,ಸೇನಾ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.