ನವದೆಹಲಿ: ಚೀನಾಕ್ಕೆ ಹೊಂದಿಕೊಂಡಿರುವಅರುಣಾಚಲ ಪ್ರದೇಶದ ಗಡಿಯಲ್ಲಿ ಯುದ್ಧ ಸನ್ನದ್ಧತೆಯನ್ನು ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಪರಿಶೀಲಿಸಿದರು.
ಈಶಾನ್ಯ ಭಾಗದಲ್ಲಿನ ಪರಿಸ್ಥಿತಿಯ ಅವಲೋಕನಕ್ಕಾಗಿ ಕೈಗೊಂಡಿರುವ ಎರಡು ದಿನಗಳ ಭೇಟಿಯ ಭಾಗವಾಗಿ ಅವರು ಗುರುವಾರ ಪರಿಶೀಲನೆ ನಡೆಸಿದರು.
‘ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಬೇಕು’ ಎಂದು ಅವರು ಸೇನೆಯ ಅಧಿಕಾರಿಗಳಿಗೆ ಸೂಚಿಸಿದರು.
ಜ. ನರವಣೆ ಅವರು ನಾಗಾಲ್ಯಾಂಡ್‌ನ ದಿಮಾಪುರದಲ್ಲಿ ಗುರುವಾರ ಬಂದಿಳಿದರು. ನಂತರ, ಅರುಣಾಚಲ ಪ್ರದೇಶದ ಗಡಿಯಲ್ಲಿನ ಸನ್ನದ್ಧತೆಯನ್ನು, ಈಶಾನ್ಯ ರಾಜ್ಯಗಳ ಒಳನಾಡಿನಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಲೆಫ್ಟಿನೆಂಟ್ ಜನರಲ್ ಜಾನ್ಸನ್ ಮ್ಯಾಥ್ಯೂ ಅವರು, ಗಡಿಗಳಲ್ಲಿನ ಸದ್ಯದ ಪರಿಸ್ಥಿತಿ ಕುರಿತು ವಿವರಿಸಿದರು. ಭದ್ರತೆಗೆ ಸಂಬಂಧಿಸಿ ಕೈಗೊಂಡ ಕ್ರಮಗಳ ಬಗ್ಗೆ ಜ. ನರವಣೆ ಅವರು ಎಲ್ಲ ಅಧಿಕಾರಿಗಳನ್ನು ಅಭಿನಂದಿಸಿದರು’ ಎಂದು ಸೇನೆ ತಿಳಿಸಿದೆ.
‘ಸಂಘರ್ಷ ಶಮನವಾಗುವವರೆಗೆ ಲಡಾಖ್‌ನಿಂದ ಅರುಣಾಚಲ ಪ್ರದೇಶವರೆಗಿನ ಗಡಿಯಲ್ಲಿ ಹೆಚ್ಚು ಕಣ್ಗಾವಲಿಗೆ ನಿರ್ಧರಿಸಲಾಗಿದೆ’ ಎಂದು ಜ.ನರವಣೆ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಅರುಣಾಚಲ ಪ್ರದೇಶದ ಗಡಿಯಲ್ಲಿ ವಾಯುಪಡೆ ಕೂಡ ಹೆಚ್ಚುವರಿಯಾಗಿ ಯುದ್ಧವಿಮಾನಗಳನ್ನು , ದಾಳಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.