ಶ್ರೀನಗರ: ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರ ಜೊತೆಗಿನ ಸೇನೆಯ ಎನ್‌ಕೌಂಟರ್ ಸಂದರ್ಭ ಗಾಯಗೊಂಡಿದ್ದ ಸೇನೆಯ ಶ್ವಾನ ಝೂಮ್ ಮೃತಪಟ್ಟಿದೆ.
ಗಾಯಗೊಂಡ ಬಳಿಕ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ಶ್ವಾನವು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.
‘54 ಎಎಫ್‌ವಿಎಚ್(ಸುಧಾರಿತ ಪಶು ವೈದ್ಯಕೀಯ ಆಸ್ಪತ್ರೆ)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೇನಾ ಶ್ವಾನ ‘ಝೂಮ್’ಮಧ್ಯಾಹ್ನ 12ರ ಸುಮಾರಿಗೆ ಮೃತಪಟ್ಟಿದೆ. ಬೆಳಿಗ್ಗೆ 11.45ರವರೆಗೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಶ್ವಾನ ದಿಢೀರನೆ ಏದುಸಿರು ಬಿಡುತ್ತಾ ಕುಸಿದುಬಿದ್ದಿತು’ಎಂದು ಸೇನೆ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಅನಂತ್ ನಾಗ್ ಜಿಲ್ಲೆಯ ಕೊಕೆರ್ ನಾಗ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಗುಂಡು ತಗುಲಿ ಶ್ವಾನ ಗಾಯಗೊಂಡಿತ್ತು. ಝೂಮ್‌ಗೆ ಎರಡು ಗುಂಡು ತಗುಲಿದ್ದವು.
‘ಗಾಯದ ಬಳಿಕವೂ ತನ್ನ ಕೆಲಸದಲ್ಲಿ ನಿರತವಾಗಿದ್ದ ಶ್ವಾನ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗೆ ನೆರವಾಗಿತ್ತು’ಎಂದು ಸೇನೆ ತಿಳಿಸಿದೆ.
ಮೃತಪಟ್ಟ ಶ್ವಾನವು ಸೇನೆಯ ಉಗ್ರರ ವಿರುದ್ಧದ ಕಾರ್ಯಾಚರಣೆ ತಂಡದಲ್ಲಿತ್ತು.
ಈ ಕಾರ್ಯಾಚರಣೆಯಲ್ಲಿ ಇಬ್ಬರು ಲಷ್ಕರ್ ಇ ತಯ್ಯಬಾ ಉಗ್ರರನ್ನು ಸೇನೆ ಕೊಂದಿತ್ತು. ಶ್ವಾನದ ಜೊತೆಗೆ ಇಬ್ಬರು ಯೋಧರು ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.