ನವದೆಹಲಿ: ‘ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸೇನೆಯಲ್ಲಿ ಅಳವಡಿಸಲು ಸಾಧ್ಯವಾಗದೇ ಹೋಗಬಹುದು’ ಎಂದು ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾನೂನಿಗಿಂತ ಸೇನೆ ದೊಡ್ಡದಲ್ಲ. ಆದರೆ, ಸೇನೆಯಲ್ಲಿ ಕೆಲವು ಸಂಪ್ರದಾಯಗಳಿವೆ. ಅದರ ಪ್ರಕಾರ, ಸಲಿಂಗ ಕಾಮಕ್ಕೆ ಅವಕಾಶ ನೀಡಲಾಗದು’ ಎಂದು ಹೇಳಿದ್ದಾರೆ.
ನಿಸರ್ಗಕ್ಕೆ ವಿರುದ್ಧವಾದ ಸಮ್ಮತಿಯ ಲೈಂಗಿಕ ಕ್ರಿಯೆಯನ್ನು ಅಪರಾಧ ಎಂದು ಪರಿಗಣಿಸುತ್ತಿದ್ದ ಭಾರತೀಯ ದಂಡ ಸಂಹಿತೆಯ 158 ವರ್ಷ ಹಳೆಯ ಕಾಯ್ದೆ 377ನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ಈ ಕಾಯ್ದೆ ಸಮಾನತೆಯನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಅಭಿಪ್ರಾಯಪಟ್ಟಿತ್ತು.
ಇದನ್ನು ಐತಿಹಾಸಿಕ ತೀರ್ಪು ಎಂದಿರುವ ರಾವತ್, ನಾವು ದೇಶದ ಕಾನೂನನ್ನು ಮೀರಿದವರಲ್ಲ. ಆದರೆ, ಭಾರತೀಯ ಸೇನೆಗೆ ಸೇರುತ್ತಿದ್ದಂತೆ ನೀವು ಅನುಭವಿಸುತ್ತಿರುವ ಹಕ್ಕುಗಳು ಹಾಗೂ ಅವಕಾಶಗಳಲ್ಲಿ ಕೆಲವು ಇಲ್ಲವಾಗುತ್ತವೆ. ಕೆಲವು ಕಾನೂನು ನಮಗೆ ಭಿನ್ನವಾಗಿರುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ.
ವಸಾಹತು ಆಳ್ವಿಕೆ ಕಾಲದಲ್ಲಿ ರಚನೆಯಾದ ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್ ಅನ್ನು ರದ್ದು ಮಾಡುವ ಮೂಲಕ, ವ್ಯಭಿಚಾರವು ಅಪರಾಧ ಅಲ್ಲ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಹೇಳಿತ್ತು. ಈ ಕುರಿತೂ ರಾವತ್, ಶಿಸ್ತುಬದ್ಧ ಸೇನೆಯಲ್ಲಿ ಇದಕ್ಕೆ ಅನುಮತಿ ಇಲ್ಲ ಎಂದು
ಪ್ರತಿಕ್ರಿಯಿಸಿದ್ದಾರೆ.
ಗಡಿ ನಿರ್ವಹಣೆ: ‘ಕಳವಳ ಬೇಡ’
ನವದೆಹಲಿ: ‘ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿನ ಪರಿಸ್ಥಿತಿಯನ್ನು ಸೇನೆ ಸೂಕ್ತವಾಗಿನಿರ್ವಹಿಸುತ್ತಿದೆ. ಈ ಕುರಿತು ಕಳವಳ ಬೇಡ’ ಎಂದು ಬಿಪಿನ್ ರಾವತ್ ಹೇಳಿದ್ದಾರೆ.
‘ಜಮ್ಮು–ಕಾಶ್ಮೀರದಲ್ಲಿನ ಪರಿಸ್ಥಿತಿ ಮತ್ತಷ್ಟು ಸುಧಾರಿಸಬೇಕಾದ ಅವಶ್ಯಕತೆ ಇದೆ. ಅಲ್ಲಿ ಶಾಂತಿ ನೆಲೆಸುವಂತೆ ಮಾತ್ರ ನಾವು ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ.
ಅಫ್ಗಾನಿಸ್ಥಾನದಲ್ಲಿನತಾಲಿಬಾನ್ ನಾಯಕರ ಜತೆಅಮೆರಿಕ ಮತ್ತು ರಷ್ಯಾ ಶಾಂತಿ ಮಾತುಕತೆಗೆ ಮುಂದಾಗಿರುವಕುರಿತು ಪ್ರತಿಕ್ರಿಯಿಸಿದ ಅವರು, ‘ಮಾತುಕತೆಯಲ್ಲಿ ಭಾಗಿಯಾಗಲುನಮಗೂ ಆಸಕ್ತಿ ಇದೆ. ಈ ಗುಂಪಿನಿಂದ ನಾವು ಹೊರಗುಳಿಯಲಾಗುವುದಿಲ್ಲ’ ಎಂದು ಹೇಳಿದ್ದಾರೆ.
‘ಆದರೆ, ಜಮ್ಮು–ಕಾಶ್ಮೀರದ ವಿಷಯದಲ್ಲಿ ಇದೇ ಸಿದ್ಧಾಂತ ಅನ್ವಯಿಸುವುದಿಲ್ಲ. ಇಲ್ಲಿ ನಮ್ಮ ನಿಯಮಗಳಂತೆಯೇ ಮಾತುಕತೆ ನಡೆಯಬೇಕು. ಭಯೋತ್ಪಾದನೆ ಮತ್ತು ಸ್ನೇಹ ಒಟ್ಟಿಗೇ ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.