ADVERTISEMENT

2016ಕ್ಕಿಂತ ಮುಂಚೆ ನಿರ್ದಿಷ್ಟ ದಾಳಿ ನಡೆದ ಮಾಹಿತಿ ಇಲ್ಲ: ಸೇನೆ

ಪಿಟಿಐ
Published 8 ಮೇ 2019, 20:01 IST
Last Updated 8 ಮೇ 2019, 20:01 IST
   

ಜಮ್ಮು:ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 2016ರ ಸೆಪ್ಟಂಬರ್‌ 29 ರಂದು ನಿರ್ದಿಷ್ಟ ದಾಳಿ ನಡೆಸಲಾಗಿತ್ತು. ಇದಕ್ಕಿಂತ ಮುನ್ನಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ನಿರ್ದಿಷ್ಟ ದಾಳಿ ನಡೆಸಿರುವ ಬಗ್ಗೆ ಸೇನೆಯಲ್ಲಿ ಯಾವುದೇ ಮಾಹಿತಿ ಇಲ್ಲ.

ನಿರ್ದಿಷ್ಟ ದಾಳಿ ನಡೆಸಿರುವ ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ (ಆರ್‌ಟಿಐ) ಕೇಳಿದ್ದ ಮಾಹಿತಿಗೆ ಸೇನಾ ಕಾರ್ಯಾಚರಣೆಯ ಪ್ರಧಾನ ನಿರ್ದೇಶನಾಲಯ (ಡಿಜಿಎಂಒ) ಈ ಉತ್ತರ ನೀಡಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಆಡಳಿತಾವಧಿಯಲ್ಲಿ ಆರು ಬಾರಿ ನಿರ್ದಿಷ್ಟ ದಾಳಿ ನಡೆಸಲಾಗಿತ್ತು ಎಂದು ಯುಪಿಎ ಮತ್ತು ಕಾಂಗ್ರೆಸ್‌ ಹೇಳಿಕೊಂಡಿದ್ದರಿಂದ ಈ ಮಾಹಿತಿ ಕೇಳಲಾಗಿತ್ತು.

‘2016ರ ಸೆಪ್ಟಂಬರ್‌ 29ಕ್ಕಿಂತ ಮುಂಚೆ ಪಿಒಕೆ ಪ್ರದೇಶದಲ್ಲಿ ಯಾವುದೇ ನಿರ್ದಿಷ್ಟ ದಾಳಿ ನಡೆಸಿರುವ ಬಗ್ಗೆ ಮಾಹಿತಿ
ಇಲ್ಲ’ ಎಂದು ಸೇನಾ ಕಾರ್ಯಾಚರಣೆ ಪ್ರಧಾನ ಕಚೇರಿಯ ಲೆಫ್ಟಿನಂಟ್‌ ಕರ್ನಲ್‌ ಎ.ಡಿ.ಎಸ್‌.ಜಸ್ರೋಟಿಯಾ ಹೇಳಿದ್ದಾರೆ.

ADVERTISEMENT

ಜಮ್ಮು ಮೂಲದ ಸಾಮಾಜಿಕ ಹೋರಾಟಗಾರ ರೋಹಿತ್‌ ಚೌಧರಿ ಆರ್‌ಟಿಐ ಅಡಿಯಲ್ಲಿ 2004 ರಿಂದ 2014ರ ಅವಧಿಯಲ್ಲಿ ಪಿಒಕೆಯಲ್ಲಿ ಎಷ್ಟು ನಿರ್ದಿಷ್ಟ ದಾಳಿ ನಡೆಸಲಾಗಿದೆ ಎಂಬ ಮಾಹಿತಿಯನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

‘ಭಾರತೀಯ ಸೇನೆಯು 2016ರ ಸೆಪ್ಟಂಬರ್‌ 29 ರಂದು ನಿರ್ದಿಷ್ಟ ದಾಳಿ ನಡೆಸಿತ್ತು. ಇದಕ್ಕೂ ಮುನ್ನ ಯಾವುದೇ ದಾಳಿ ನಡೆಸಿರುವ ಮಾಹಿತಿ ಇಲ್ಲ. ಈ ದಾಳಿಯ ಸಂದರ್ಭದಲ್ಲಿ ನಮ್ಮ ಯೋಧರು ಮೃತಪಟ್ಟಿರಲಿಲ್ಲ. ದಾಳಿಯು ಯಶಸ್ವಿಯಾಗಿತ್ತು‘ ಎಂದು ಡಿಜಿಎಂಒ ಅಧಿಕಾರಿಯು ಆರ್‌ಟಿಐ ಅರ್ಜಿಗೆ ಉತ್ತರ ನೀಡಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ನಾಯಕ ರಾಜೀವ್‌ ಶುಕ್ಲಾ ಅವರು ಆರು ಬಾರಿ ನಿರ್ದಿಷ್ಟ ದಾಳಿ ನಡೆಸಲಾಗಿತ್ತು ಎಂದು ಹೇಳಿಕೊಂಡಿದ್ದರು. ‘ಸುಳ್ಳು ಹೇಳುವ ಹವ್ಯಾಸ’ ಕಾಂಗ್ರೆಸ್‌ಗೆ ಇದೆ ಎಂದು ಬಿಜೆಪಿ ಟೀಕಿಸಿತ್ತು. ಸೇನೆಯ ಮಾಜಿ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ವಿ.ಕೆ.ಸಿಂಗ್‌ ಸಹ ಯುಪಿಎ ಅವಧಿಯಲ್ಲಿ ನಿರ್ದಿಷ್ಟ ದಾಳಿ ನಡೆದಿರಲಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.