ನವದೆಹಲಿ: ‘ಆರೋಗ್ಯ ಮೈತ್ರಿ ಹೆಲ್ತ್ ಕ್ಯೂಬ್’ ಸಂಚಾರಿ ಆಸ್ಪತ್ರೆಯನ್ನು ನಿಖರವಾದ ಸ್ಥಳದಲ್ಲಿ ಪ್ಯಾರಾಚೂಟ್ ಬಳಸಿ ಇಳಿಸುವ ಕಾರ್ಯಾಚರಣೆಯನ್ನು ಭಾರತೀಯ ವಾಯುಪಡೆ ಹಾಗೂ ಭೂಸೇನೆ ಜಂಟಿಯಾಗಿ ನಡೆಸಿದವು.
ಸಂಚಾರಿ ಆಸ್ಪತ್ರೆಯನ್ನು ಪ್ಯಾರಾಚೂಟ್ ಬಳಸಿ ಹೀಗೆ ನಿಖರವಾಗಿ ಇಳಿಸಿರುವುದು ಇದೇ ಮೊದಲು ಎಂದು ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.
ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಒದಗಿಸುವ ಈ ಸಂಚಾರಿ ಆಸ್ಪತ್ರೆಗಳನ್ನು ‘ಭೀಷ್ಮ್ ಯೋಜನೆ’ಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ನೆರವು ಹಾಗೂ ವಿಪತ್ತು ಪರಿಹಾರದ ಭಾಗವಾಗಿ ನಿರ್ದಿಷ್ಟ ಸ್ಥಳಗಳಿಗೆ ಅಗತ್ಯ ಪರಿಕರಗಳನ್ನು ಒದಗಿಸುವ ಪ್ರಧಾನ ಮಂತ್ರಿಯವರ ಆಲೋಚನೆಗೆ ಅನುಗುಣವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಸಂಚಾರಿ ಆಸ್ಪತ್ರೆಯನ್ನು ರವಾನಿಸಲು ಹಾಗೂ ಪ್ಯಾರಾಚೂಟ್ ಮೂಲಕ ಇಳಿಸಲು ವಾಯುಪಡೆಯು ತನ್ನ ಆಧುನಿಕ ಸರಕು ಸಾರಿಗೆ ವಿಮಾನ ‘ಸಿ–130ಜೆ ಸೂಪರ್ ಹರ್ಕ್ಯುಲಿಸ್’ ಬಳಸಿತ್ತು.
ಭಾರತೀಯ ಸೇನೆಯ ಪ್ಯಾರಾ ಬ್ರಿಗೇಡ್ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿತ್ತು. ಈ ಕಾರ್ಯಾಚರಣೆಯು ಅತ್ಯಂತ ದುರ್ಗಮವಾದ ಹಾಗೂ ಪರ್ವತಗಳಿಂದ ಕೂಡಿರುವ ಪ್ರದೇಶಗಳಲ್ಲಿಯೂ ಈ ಆಸ್ಪತ್ರೆಯನ್ನು ಪ್ಯಾರಾಚೂಟ್ ಮೂಲಕ ಇಳಿಸುವ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ ಎಂದು ಕೂಡ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.