ಡೆಹ್ರಾಡೂನ್: ಲಂಚ ಪಡೆದ ಪ್ರಕರಣದಲ್ಲಿ ಸಿಬಿಐವಿಶೇಷ ನ್ಯಾಯಾಲಯವು ಸೇನೆಯ ಲೆಫ್ಟಿನಂಟ್ ಕರ್ನಲ್ ಅವರಿಗೆ 10 ವರ್ಷ ಹಾಗೂ ಇನ್ನೊಬ್ಬ ಅಧಿಕಾರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಲೆಫ್ಟಿನಂಟ್ ಕರ್ನಲ್ ಭರತ್ ಜೋಷಿ ಮತ್ತು ಅಧಿಕಾರಿ ಮನೀಶ್ ಸಿಂಗ್ ಶಿಕ್ಷೆಗೆ ಒಳಗಾದವರು. ಅಲ್ಲದೆ, ಇವರಿಗೆ ಕ್ರಮವಾಗಿ ₹ 55 ಸಾವಿರ ಮತ್ತು ₹ 15 ಸಾವಿರ ದಂಡವನ್ನು ಸಿಬಿಐ ನ್ಯಾಯಾಧೀಶರಾದ ಸುಜಾತಾ ಸಿಂಗ್ ವಿಧಿಸಿದರು.
ಪ್ರಕರಣ ಐದು ವರ್ಷದ ಹಿಂದಿನದಾಗಿದೆ. ಆಗ ಜೋಷಿ ಅವರು ಸೇನೆಯ ಎಂಜಿನಿಯರಿಂಗ್ ಸರ್ವೀಸ್ ವಿಭಾಗದಲ್ಲಿ ಗ್ಯಾರಿಸನ್ ಎಂಜಿನಿಯರ್ ಆಗಿದ್ದರು. ಬಿಲ್ ಇತ್ಯರ್ಥಪಡಿಸಲು ಗುತ್ತಿಗೆದಾರರಿಂದ ₹ 38 ಸಾವಿರ ಲಂಚ ಕೇಳಿದ್ದರು. ಆಗ ಸಹಾಯಕ ಗ್ಯಾರಿಸನ್ ಎಂಜಿನಿಯರ್ ಆಗಿದ್ದ ಮನೀಶ್ ಸಿಂಗ್ ಒಂದೇ ಬಾರಿಗೆ ಲಂಚದ ಹಣ ನೀಡಬೇಕು ಎಂದು ಒತ್ತಡ ಹೇರಿದ್ದರು.
ಮೊದಲ ಕಂತಾಗಿ ₹ 10 ಸಾವಿರ ಲಂಚ ನೀಡಿದ್ದ ಗುತ್ತಿಗೆದಾರ, ನಂತರ ಸಿಬಿಐಗೆ ದೂರು ಸಲ್ಲಿಸಿದ್ದರು. ಲಂಚದ ಎರಡನೇ ಕಂತು ಪಡೆಯುವಾಗ ಇಬ್ಬರೂ ಸಿಕ್ಕಿಬಿದ್ದಿದ್ದರು ಎಂದು ಸರ್ಕಾರದ ಪರ ವಾದಿಸಿದ ವಕೀಲ ಸತೀಶ್ ಗರ್ಗ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.