ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ(ಎಲ್‌ಒಸಿ) ತಂಗ್ದಾರ್ ವಲಯದ ಮುಂಚೂಣಿ ನೆಲೆಯಲ್ಲಿ ನಿಯೋಜನೆಗೊಂಡಿದ್ದ ಸೇನಾ ಅಧಿಕಾರಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಆರನೇ ರೈಫಲ್ಸ್‌ನ ಕಂಪನಿ ಕಮಾಂಡರ್ ಮೇಜರ್ ಫಯಾಜುಲ್ಲಾ ಖಾನ್ ಮೃತ ಅಧಿಕಾರಿ. ಖಾನ್ ಈ ರೀತಿ ನಿರ್ಧಾರವನ್ನು ಏಕೆ ತೆಗೆದುಕೊಂಡರು ಎನ್ನುವುದಕ್ಕೆ ತಕ್ಷಣದಲ್ಲಿ ಯಾವುದೇ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಾಶ್ಮೀರದಲ್ಲಿ ನಿಯೋಜನೆಗೊಂಡ ಭದ್ರತಾ ಪಡೆಗಳ ಸಿಬ್ಬಂದಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಘಟನೆಗಳು 1990 ರಿಂದ 2010ರವರೆಗೆ ಸಾಮಾನ್ಯವಾಗಿತ್ತು. 2012ರಲ್ಲಿ ಇಲ್ಲಿನ ಸಮಾಜಶಾಸ್ತ್ರಜ್ಞರೊಬ್ಬರು ನಡೆಸಿದ ಸಂಶೋಧನೆ ಅನ್ವಯ, 1990 ರಿಂದ 2011ರ ನಡುವೆ 1500–2,000 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರೊ.ಬಶೀರ್ ಅಹ್ಮದ್ ಡಾಬ್ಲ ಅವರು ನಡೆಸಿದ್ದ ಈ ಸಂಶೋಧನೆಯಲ್ಲಿ, ಆತ್ಮಹತ್ಯೆ ಮಾಡಿಕೊಂಡ ಬಹುತೇಕ ಯೋಧರು ಮದುವೆಯಾಗಿದ್ದರು ಎಂದು ಉಲ್ಲೇಖಿಸಲಾಗಿತ್ತು.
ಆತ್ಮಹತ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ 2006ರಲ್ಲಿ ಅಂದಿನ ರಕ್ಷಣಾ ಮಂತ್ರಿಗಳು ಮನಃಶಾಸ್ತ್ರಜ್ಞರ ತಂಡವೊಂದನ್ನು ರಚಿಸಿದ್ದರು. ಇದಾದ ಬಳಿಕ ಕಳೆದೊಂದು ದಶಕದಿಂದ ಸೇನೆಯಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.