ADVERTISEMENT

ಕಾಪ್ಟರ್ ದುರಂತ: ಬಿಪಿನ್ ರಾವತ್ ಪತ್ನಿ ಮಧುಲಿಕಾ ಅವರ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2021, 9:55 IST
Last Updated 9 ಡಿಸೆಂಬರ್ 2021, 9:55 IST
ಬಿಪಿನ್ ರಾವತ್ ಅವರ ಜೊತೆ ಮಧುಲಿಕಾ ರಾವತ್ ಸೇನಾ ಆಸ್ಪತ್ರೆಯಲ್ಲಿ, ಫೈಲ್ ಪೋಟೊ, ಇಂಡಿಯನ್ ಆರ್ಮಿ
ಬಿಪಿನ್ ರಾವತ್ ಅವರ ಜೊತೆ ಮಧುಲಿಕಾ ರಾವತ್ ಸೇನಾ ಆಸ್ಪತ್ರೆಯಲ್ಲಿ, ಫೈಲ್ ಪೋಟೊ, ಇಂಡಿಯನ್ ಆರ್ಮಿ   

ನವದೆಹಲಿ: ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸುಮಾರು ಮೂರು ದಶಕಗಳ ಕಾಲ ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾ ದಕ್ಷತೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ 2019 ರಲ್ಲಿ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರನ್ನಾಗಿ (ಸಿಡಿಎಸ್)ಮಾಡಿತ್ತು.

ನಿನ್ನೆ ತಮಿಳುನಾಡಿನಲ್ಲಿ ನಡೆದ ದುರಂತದಲ್ಲಿ ಬಿಪಿನ್ ಅವರ ಜೊತೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಅವರ ಪತ್ನಿ ಮಧುಲಿಕಾ ರಾವತ್ ಅವರೂ ಸಹ ಇಹಲೋಕ ತ್ಯಜಿಸಿದ್ದಾರೆ. ಮಧುಲಿಕಾ ಅವರ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲ. ಆದರೆ, ಸೇನಾ ವಲಯದಲ್ಲಿ ಅವರು ಮಾಡಿರುವ ಕೆಲಸಗಳಿಂದ ಇಂದು ಸೇನಾ ಸಿಬ್ಬಂದಿ, ನಿವೃತ್ತರು ಹಾಗೂ ಅವರ ಕುಟುಂಬದವರು ಕಂಬನಿ ಮಿಡಿಯುತ್ತಿದ್ದಾರೆ.

ಸೇನಾ ಸಿಬ್ಬಂದಿ ಪತ್ನಿಯರ ಕಲ್ಯಾಣ ಸಂಘಟನೆ (AWWA) ಎಂಬ ಎನ್‌ಜಿಒದ ಅಧ್ಯಕ್ಷೆಯಾಗಿ ಮಧುಲಿಕಾ ರಾವತ್ ಕೆಲಸ ಮಾಡುತ್ತಿದ್ದರು. ಈ ಸಂಸ್ಥೆಯು ಸೇನಾ ಸಿಬ್ಬಂದಿಗಳ ಕುಟುಂಬದವರಿಗೆ, ನಿವೃತ್ತ ಯೋಧರಿಗೆ ಹಾಗೂ ಹುತಾತ್ಮ ಯೋಧರ ಪತ್ನಿಯರ ಏಳ್ಗೆಗಾಗಿ ಶ್ರಮಿಸುತ್ತಿದೆ.

ADVERTISEMENT

ದೆಹಲಿ ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದ ಅವರು,AWWA ಮೂಲಕ ಸೇನಾ ಸಿಬ್ಬಂದಿಯ ಪತ್ನಿಯರ ಸಂಘಟನೆ, ಏಳ್ಗೆಗೆ ಶ್ರಮಿಸುತ್ತಿದ್ದರು. ಅಲ್ಲದೇ ಹುತಾತ್ಮ ಯೋಧರ ಪತ್ನಿಯರ ಹಾಗೂ ಅಂಗವಿಕಲರ ಕಲ್ಯಾಣಾರ್ಥವಾಗಿ ಸಾಕಷ್ಟು ಕೆಲಸಗಳನ್ನು ಕೈಗೊಂಡಿದ್ದರು. ಈ ಕುರಿತು ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ಸ್ಮರಿಸುತ್ತಿದ್ದಾರೆ.

ಬಿಪಿನ್ ರಾವತ್ ಹಾಗೂ ಮಧುಲಿಕಾ ದಂಪತಿ ತಮ್ಮ ಇಬ್ಬರು ಹೆಣ್ಣು ಮಕ್ಕಳಾದ ಕೃತಿಕಾ ರಾವತ್, ತರಿಣಿ ರಾವತ್ ಅವರನ್ನು ಅಗಲಿದ್ದಾರೆ.

ತಮಿಳುನಾಡಿನ ನೀಲಗೀರಿ ಜಿಲ್ಲೆಯ ಕೂನೂರಿನಲ್ಲಿ ಗುರುವಾರಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಹಾಗೂ 11 ಜನ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.

ನವದೆಹಲಿಯಲ್ಲಿ ಸಂಪೂರ್ಣ ಸೇನಾ ಗೌರವದೊಂದಿಗೆ ಬಿಪಿನ್ ರಾವತ್ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ರಾಜ್‌ನಾಥ್ ಸಿಂಗ್ ಅವರು ತಿಳಿಸಿದ್ದು, ಇಂದು ಸಂಜೆ ಮೃತರ ಪಾರ್ಥಿವ ಶರೀರ ಅಲ್ಲಿಗೆ ತಲುಪಬಹುದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.