ADVERTISEMENT

ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಚಿಂತನೆ: ಸೈನಿಕೇತರ ಸಿಬ್ಬಂದಿಗೆ ಲಾಭ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 19:56 IST
Last Updated 21 ಡಿಸೆಂಬರ್ 2019, 19:56 IST
ಬಿಪಿನ್‌ ರಾವತ್‌
ಬಿಪಿನ್‌ ರಾವತ್‌    

ನವದೆಹಲಿ: ಸೇನೆಯಲ್ಲಿರುವ ಸೈನಿಕೇತರ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು ಸುಮಾರು 16 ವರ್ಷಗಳಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಆದರೆ ಅದನ್ನು ಹಂತಹಂತವಾಗಿ ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೇನೆಯ ಹಿಂದಿನ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ಕೆಲವು ತಿಂಗಳ ಹಿಂದೆ, ಇಂಥ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು 58 ವರ್ಷಕ್ಕೆ ಏರಿಸುವ ಪ್ರಸ್ತಾವವನ್ನಿಟ್ಟಿದ್ದರು. ಇದು ಜಾರಿಯಾದರೆ ಸುಮಾರು ಮೂರು ಲಕ್ಷ ಸಿಬ್ಬಂದಿಗೆ ಅನುಕೂಲವಾಗಲಿದೆ. ಸೈನಿಕರ ನಿವೃತ್ತಿ ವಯಸ್ಸನ್ನು ಸರ್ಕಾರ ಈಗಾಗಲೇ ಎರಡು ವರ್ಷಗಳಷ್ಟು ಏರಿಕೆ ಮಾಡಿದೆ.

ಸೈನಿಕೇತರ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು ಹೆಚ್ಚಿಸಿದರೆ ಅವರ ಅನುಭವದ ಲಾಭವನ್ನು ಪಡೆಯಲು ಸೇನೆಗೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಸೇನೆಯ ಆಸ್ಪತ್ರೆಗಳಲ್ಲಿರುವ ನರ್ಸಿಂಗ್‌ ಸಹಾಯಕರು, ರೋಗ ಪತ್ತೆ ತಂತ್ರಜ್ಞರು, ವಿವಿಧ ಡಿಪೊಗಳಲ್ಲಿ ಕೆಲಸ ಮಾಡುವ ತಂತ್ರಜ್ಞರು ಹೀಗೆ ಹಲವರು ಸೇನೆಯಲ್ಲಿ ಸುದೀರ್ಘ ಅನುಭವ ಹೊಂದಿರುತ್ತಾರೆ. ಇಂಥವರ ತರಬೇತಿಗಾಗಿ ಸೇನೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುತ್ತದೆ. ಇಂಥವರು 42ನೇ ವಯಸ್ಸಿನಲ್ಲಿ ನಿವೃತ್ತರಾದರೆ ಬಳಿಕ ಅವರು ಖಾಸಗಿ ಸಂಸ್ಥೆಗಳನ್ನು ಸೇರುತ್ತಾರೆ. ಸೇನೆ ನೀಡಿದ ತರಬೇತಿ ಹಾಗೂ ಅವರ ಅನುಭವದ ಲಾಭವು ಖಾಸಗಿ ಸಂಸ್ಥೆಯವರಿಗೆ ಲಭಿಸುತ್ತದೆ ಎಂಬುದು ಸೇನೆಯ ವಾದವಾಗಿದೆ.

ADVERTISEMENT

ನಿವೃತ್ತಿ ವಯಸ್ಸು ಹೆಚ್ಚಿಸುವ ಪ್ರಸ್ತಾವ ಜಾರಿಗೆ ಬಂದರೆ ಸೇನೆಯಲ್ಲಿರುವ ಶೇ 30ರಿಂದ 40ರಷ್ಟು ಸಿಬ್ಬಂದಿಯನ್ನು ಸೇವೆಯಲ್ಲಿ ಮುಂದುವರಿಯಬೇಕಾಗುತ್ತದೆ. ಇದರ ಬದಲಿಗೆ, ಮೊದಲ ಹಂತದಲ್ಲಿ ನಿವೃತ್ತಿಯ ವಯಸ್ಸನ್ನು ಈಗಿರುವ 42 ವರ್ಷದಿಂದ 50 ವರ್ಷಕ್ಕೆ ಹೆಚ್ಚಿಸುವುದು, ಆನಂತರ 54ಕ್ಕೆ ಹಾಗೂ ಕೊನೆ ಹಂತದಲ್ಲಿ 58ಕ್ಕೆ ಏರಿಸುವ ಯೋಜನೆ ರೂಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.