ಲೇಹ್: ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ ಮತ್ತು ಶ್ಯೋಕ್ ನದಿ ಕಣಿವೆಯ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್‌ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಕನಿಷ್ಠ 80 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆ ಭಾನುವಾರ ಹೇಳಿದೆ.
ತ್ರಿಶೂಲ್ ವಿಭಾಗದ ಸೈನಿಕರು ತಡರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಭಾರತೀಯ ಸೇನೆಯ ಲೇಹ್ ಮೂಲದ 14 ಕಾರ್ಪ್ಸ್ (ಫೈರ್ ಅಂಡ್ ಫ್ಯೂರಿ ಕಾರ್ಪ್ಸ್) ತಿಳಿಸಿದೆ.
'ಚಾಂಗ್ ಲಾದ ಹಿಮಾವೃತ ಪ್ರದೇಶದಲ್ಲಿ ಭಾರಿ ಹಿಮಪಾತ ಸಂಭವಿತ್ತು. ಮಾಹಿತಿ ತಿಳಿದ ತ್ರಿಶೂಲ್ ವಿಭಾಗದ ಸೈನಿಕರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ತಡರಾತ್ರಿ 2 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಹಿಮದಲ್ಲಿ ಸಿಲುಕಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 80 ಜನರನ್ನು ರಕ್ಷಿಸಿದ್ದಾರೆ' ಎಂದು ಕಾರ್ಪ್ಸ್ ತನ್ನ ಅಧಿಕೃತ ಖಾತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಅಲ್ಲದೇ ರಕ್ಷಣಾ ಕಾರ್ಯಾಚರಣೆಯ ಕೆಲವು ಚಿತ್ರಗಳು ಮತ್ತು ವಿಡಿಯೊವನ್ನು ಸಹ ಹಂಚಿಕೊಂಡಿದೆ.
ದುರ್ಗಮ ಪ್ರದೇಶಗಳಲ್ಲಿ ನಡೆಯುವ ಕದನಗಳಲ್ಲಿ ವೈರಿ ಪಡೆಗೆ ತಕ್ಕ ಉತ್ತರ ನೀಡುವ ಬಲಿಷ್ಠ ತುಕಡಿ 14 ಕಾರ್ಪ್ಸ್. ಹೀಗಾಗಿ ಇದಕ್ಕೆ ‘ಫೈರ್ ಆ್ಯಂಡ್ ಫ್ಯೂರಿ ಕಾರ್ಪ್ಸ್’ ಎಂದು ಕರೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.