ADVERTISEMENT

ಶ್ರೀನಗರದಲ್ಲಿ ಭಾರಿ ಹಿಮಪಾತ, ಭೂಕುಸಿತ; 80 ವಿದ್ಯಾರ್ಥಿಗಳನ್ನು ರಕ್ಷಿಸಿದ ಸೇನೆ

ಪಿಟಿಐ
Published 22 ಫೆಬ್ರುವರಿ 2024, 13:16 IST
Last Updated 22 ಫೆಬ್ರುವರಿ 2024, 13:16 IST
<div class="paragraphs"><p>ಭಾರಿ ಹಿಮಪಾತದ ನಡುವೆ ಕರ್ತವ್ಯ ನಿರತ ಯೋಧ</p></div>

ಭಾರಿ ಹಿಮಪಾತದ ನಡುವೆ ಕರ್ತವ್ಯ ನಿರತ ಯೋಧ

   

(ಪಿಟಿಐ ಚಿತ್ರ)

ಬನಿಹಾಲ್/ಜಮ್ಮು: ಜಮ್ಮುವಿನಲ್ಲಿ ಸಂಭವಿಸಿದ ಭಾರಿ ಹಿಮಪಾತ ಮತ್ತು ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿ ಆತಂಕಗೊಂಡಿದ್ದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಸಿಬ್ಬಂದಿಯನ್ನು ಸೇನಾ ಪಡೆಗಳು ರಕ್ಷಿಸಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ADVERTISEMENT

ಬುಧವಾರ ಭಾರಿ ಹಿಮಪಾತ ಮತ್ತು ಭೂಕುಸಿತದಿಂದ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿ ಅನೇಕ ಪ್ರಯಾಣಿಕರು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಲುಕಿದ್ದರು. ಇದರಲ್ಲಿ ರಾಜಸ್ಥಾನದ ಕಾನೂನು ಕಾಲೇಜಿನ 74 ವಿದ್ಯಾರ್ಥಿಗಳು ಮತ್ತು ಏಳು ಸಿಬ್ಬಂದಿ ಕೂಡ ಇದ್ದರು. ಸೇನಾ ಪಡೆಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ರಕ್ಷಣೆ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರಕ್ಕೆ ಪ್ರವಾಸ ಬಂದಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾರಿ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿದ್ದರಿಂದ ಮೂರು ದಿನಗಳ ಕಾಲ ಖಾಜಿಗುಂಡ್‌ನಲ್ಲಿ ಸಿಲುಕಿಕೊಂಡಿದ್ದರು. 

‘ಬನಿಹಾಲ್ ದಾಟಿದ ನಂತರ ನಮ್ಮ ವಾಹನದಿಂದ ಮುಂದೆ ಕೇವಲ 500 ಮೀಟರ್ ದೂರದಲ್ಲಿ ಭೂಕುಸಿತ ಸಂಭವಿಸಿದೆ. ನಾವು ಭಯಭೀತರಾಗಿದ್ದೇವೆ’ ಎಂದು ವಿದ್ಯಾರ್ಥಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದರು.

ರಕ್ಷಣೆ ಮಾಡಿದ ಭಾರತೀಯ ಸೇನೆಯನ್ನು ಉದಯಪುರದ ಮೋಹನ್‌ಲಾಲ್ ಸುಖಾಡಿಯಾ ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಪ್ರೊಫೆಸರ್ ಕಲ್ಪೇಶ್ ನಿಕಾವತ್ ಶ್ಲಾಘಿಸಿದ್ದಾರೆ. ‘ಇಂತಹ ಪ್ರತಿಕೂಲ ವಾತಾವರಣದಲ್ಲಿ ನಮ್ಮ ರಕ್ಷಣೆಗೆ ಬಂದು, ನಮಗೆ ಆಹಾರ ಮತ್ತು ವಸತಿ ಒದಗಿಸಿದ ಸೇನೆಗೆ ಧನ್ಯವಾದ ತಿಳಿಸಲು ನನ್ನಲ್ಲಿ ಪದಗಳಿಲ್ಲ. ಸೇನೆಗೆ ನಮನಗಳು’ ಎಂದು ನಿಕಾವತ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.