ನವದೆಹಲಿ: ಯುದ್ಧದ ಸ್ವರೂಪವನ್ನು ತಂತ್ರಜ್ಞಾನ ಬದಲಾಯಿಸಿರುವ ಸಂದರ್ಭದಲ್ಲಿ ಶತ್ರುಗಳ ತಂತ್ರಜ್ಞಾನ ದಾಳಿ ತಡೆಗೆ ಭಾರತೀಯ ಸೇನೆಯು ‘ಡೊಮೇನ್ ಪರಿಣತ’ರ ನೇಮಕಕ್ಕೆ ಸಜ್ಜಾಗಿದೆ.
ಬಾಹ್ಯಾಕಾಶ ಮತ್ತು ಲೇಸರ್ ಶಸ್ತ್ರಾಸ್ತ್ರಗಳಿಂದಿಡಿದು ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್), 3ಡಿ ಪ್ರಿಂಟಿಂಗ್ ಮತ್ತು ರೊಬೊಟಿಕ್ಸ್‌ವರೆಗಿನ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸೇನೆಯು 16 ತಂತ್ರಜ್ಞಾನ ಕ್ಲಸ್ಟರ್‌ಗಳನ್ನು ತೆರೆದ ಬೆನ್ನಲ್ಲೇ ಈ ಹೊಸ ನೇಮಕಾತಿಗೆ ಮುಂದಾಗಿದೆ.
‘ಕಾಲಕ್ಕೆ ತಕ್ಕಂತೆ ನಾವು ಹೆಜ್ಜೆ ಇಡಲು ಭಾರತೀಯ ಸೇನೆಯನ್ನು ಮರುರೂಪಿಸುತ್ತಿದ್ದೇವೆ. ಸೇನೆಯ ಪುನರ್ ರಚನೆಗಾಗಿ ಡೊಮೇನ್ ತಜ್ಞರನ್ನು ಅಧಿಕಾರಿಗಳು ಮತ್ತು ಜೂನಿಯರ್ ಕಮಿಷನ್ಡ್ ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳುತ್ತಿದ್ದೇವೆ. ಮೊದಲ ಬ್ಯಾಚ್ ನೇಮಕ 2025ರ ಮಧ್ಯದಲ್ಲಿ ನಡೆಯಲಿದೆ. ಇದಕ್ಕಾಗಿ ಒಂದು ತಿಂಗಳಲ್ಲಿ ಜಾಹೀರಾತು ನೀಡಲಾಗುವುದು’ ಎಂದು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಕೇಶ್ ಕಪೂರ್ ಹೇಳಿದ್ದಾರೆ.
ಅಧಿಕಾರಿಗಳ ಶ್ರೇಣಿಗೆ ಸ್ನಾತಕೋತ್ತರ ಪದವಿಧರರನ್ನು ಮತ್ತು ಜೆಸಿಒಗಳು ಅಥವಾ ಒಆರ್‌ಗಳಾಗಿ (ಇತರ ಶ್ರೇಣಿಗಳು) ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಸೈಬರ್ ವಾರ್‌ಫೇರ್, ಕ್ವಾಂಟಮ್ ತಂತ್ರಜ್ಞಾನಗಳು; 5ಜಿ/ 6ಜಿ ಸಂವಹನ ತಂತ್ರಜ್ಞಾನಗಳು; ಯಾಂತ್ರಿಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್, ರಿಮೋಟ್ ಪೈಲಟ್ ವಿಮಾನ; ಡ್ರೋನ್ ದಾಳಿ ನಿಗ್ರಹ ತಂತ್ರಜ್ಞಾನ, ಬ್ಲಾಕ್ ಚೈನ್ ಮತ್ತು ಯುದ್ಧಸಾಮಗ್ರಿಗಳನ್ನು ಸನ್ನದ್ಧ ಸ್ಥಿತಿಯಲ್ಲಿಡುವ ಕ್ಷೇತ್ರಗಳಲ್ಲಿ ಕ್ಲಸ್ಟರ್‌ಗಳನ್ನು ತೆರೆಯಲಾಗಿದೆ. ಈ ಕ್ಲಸ್ಟರ್‌ಗಳ ಮುಖ್ಯಸ್ಥರಾಗಿರುವ ಅಧಿಕಾರಿಗಳಿಗೆ ಗುರಿ ಸಾಧಿಸಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಸೇನೆಯಲ್ಲಿ ಸಿಗ್ನಲ್‌ಗಳು, ಸಂವಹನಗಳು ಮತ್ತು ಮಾಹಿತಿ ವ್ಯವಸ್ಥೆಗಳ ಉಸ್ತುವಾರಿ ವಹಿಸಿರುವ ಲೆಫ್ಟಿನೆಂಡ್ ಜನರಲ್ ಕಪೂರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.