ಮುಂಬೈ: ‘ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರುಟಿಆರ್‌ಪಿ ತಿರುಚುವ ಸಲುವಾಗಿ ನನಗೆ₹ 40 ಲಕ್ಷ ಮತ್ತು 12,000 ಅಮೆರಿಕನ್ ಡಾಲರ್ (ಸುಮಾರು₹ 8.75 ಲಕ್ಷ) ನೀಡಿದ್ದರು’ ಎಂದು 'ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್‌ನ (ಬಾರ್ಕ್)' ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾ ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯು ಬಹಿರಂಗವಾಗಿದೆ. ಟಿಆರ್‌ಪಿ ತಿರುಚುವಿಕೆ ಹಗರಣದ ಆರೋಪಟ್ಟಿಯಲ್ಲಿ ಈ ಹೇಳಿಕೆ ಇದೆ.
ಟಿಆರ್‌ಪಿ ತಿರುಚುವಿಕೆ ಮತ್ತು ಬಾಲಾಕೋಟ್ ದಾಳಿಗೆ ಸಂಬಂಧಿಸಿದ ಮಾಹಿತಿಯನ್ನು ಅರ್ನಬ್ ಮತ್ತು ಪಾರ್ಥೊ ಅವರು ವಾಟ್ಸ್‌ಆ್ಯಪ್‌ನಲ್ಲಿ ಚರ್ಚಿಸಿದ್ದಕ್ಕೆ ಸಂಬಂಧಿಸಿದ ಚಾಟ್ ವಿವರಗಳು ಕಳೆದ ವಾರ ಬಹಿರಂಗವಾಗಿದ್ದವು. ಈಗ ಈ ಮಾಹಿತಿ ಬಹಿರಂಗವಾಗಿದೆ.
2013ರ ನವೆಂಬರ್‌ನಿಂದ 2019ರವರೆಗೆ ಪಾರ್ಥೊ ಅವರು ಬಾರ್ಕ್ ಸಿಇಒ ಆಗಿದ್ದರು. ಅರ್ನಬ್ ಅವರು 2017ರಲ್ಲಿ ರಿಪಬ್ಲಿಕ್ ಟಿವಿ ಆರಂಭಿಸಿದ್ದರು. ಇದಕ್ಕೂ ಮುನ್ನ ಅರ್ನಬ್ ಮತ್ತು ಪಾರ್ಥೊ ಅವರು ಬೇರೊಂದು ಸುದ್ದಿವಾಹಿನಿಯಲ್ಲಿ ಸಹೋದ್ಯೋಗಿಗಳಾಗಿದ್ದರು.
ಟಿಆರ್‌ಪಿ ತಿರುಚುವಿಕೆ ಹಗರಣದಲ್ಲಿ ಮುಂಬೈ ಪೊಲೀಸ್‌ನ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕವು (ಸಿಐಯು) ಪಾರ್ಥೊ ಅವರನ್ನು ಬಂಧಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯಲ್ಲಿ ಪಾರ್ಥೊ ಅವರು ಹಣ ಪಡೆದುದರ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಈ ಮಾಹಿತಿ ಇದೆ.
‘ಮೂರು ವರ್ಷಗಳಲ್ಲಿ ಟಿಆರ್‌ಪಿಯನ್ನು ತಿರುಚಲು ಅರ್ನಬ್ ಅವರು₹ 40 ಲಕ್ಷ ಮತ್ತು 12,000 ಅಮೆರಿಕನ್ ಡಾಲರ್ ನೀಡಿದ್ದರು. ಅರ್ನಬ್ 2017ರಲ್ಲಿ ರಿಪಬ್ಲಿಕ್ ಟಿವಿ ಆರಂಭಿಸಿದರು. ಆದರೆ ಅದಕ್ಕೂ ಮುನ್ನವೇ ಅವರ ಯೋಜನೆಗಳ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಅವರ ಸುದ್ದಿವಾಹಿನಿಯ ರೇಟಿಂಗ್ ಅನ್ನು ತಿರುಚುವಲ್ಲಿ ಸಹಾಯ ಮಾಡಲು ಕೇಳುವುದರ ಬಗ್ಗೆ ಪರೋಕ್ಷ ಸುಳಿವುಗಳನ್ನು ಬಿಟ್ಟುಕೊಟ್ಟಿದ್ದರು. ಟಿಆರ್‌ಪಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ನನಗೆ ಗೊತ್ತಿದೆ ಎಂಬುದು ಅರ್ನಬ್ ಅವರಿಗೆ ಚೆನ್ನಾಗಿ ತಿಳಿದಿತ್ತು. ಭವಿಷ್ಯದಲ್ಲಿ ಟಿಆರ್‌ಪಿ ತಿರುಚಲು ಸಹಾಯ ಮಾಡುವ ವಿಚಾರವನ್ನು ಅವರು ನನ್ನಲ್ಲಿ ಪ್ರಸ್ತಾಪಿಸಿದ್ದರು' ಎಂದು ಪಾರ್ಥೊ ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ.
‘ತಾನು ಸತ್ಯದ ಜತೆ ನಿಲ್ಲುವ ಮತ್ತು ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುವ ನಿರೂಪಕ ಎಂದು ಅರ್ನಬ್ ಗೋಸ್ವಾಮಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದರು. ತಮ್ಮ ಆರ್ಥಿಕ ಲಾಭವನ್ನು ಭಾರಿ ಪ್ರಮಾಣದಲ್ಲಿ ಏರಿಸಿಕೊಳ್ಳುವ ಉದ್ದೇಶದಿಂದ ಅಕ್ರಮ ಎಸಗಿದ ಪ್ರಕರಣದಲ್ಲಿ ಈಗ ಅರ್ನಬ್ ಅವರೇ ಸಿಕ್ಕಿಬಿದ್ದಿದ್ದಾರೆ’ ಎಂದು ಎನ್‌ಸಿಪಿ ವಕ್ತಾರ ಮಹೇಶ್ ತಪಾಸೆ ಅವರು ಹೇಳಿದ್ದಾರೆ.
ಅರ್ನಬ್ ಬಂಧನಕ್ಕೆ ಆಗ್ರಹ
ಅರ್ನಬ್ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಆಗ್ರಹಿಸಿದೆ.
‘ಟಿಆರ್‌ಪಿ ಹಗರಣದಲ್ಲಿ ಇದು ಅತ್ಯಂತ ಮಹತ್ವದ ಸಾಕ್ಷ್ಯ. ಭ್ರಷ್ಟಾಚಾರದ ಆರೋಪಿಯಾದ ಅರ್ನಬ್‌ನನ್ನು ಬಿಜೆಪಿ ಏಕೆ ರಕ್ಷಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ದೇಶವು ಬಯಸುತ್ತಿದೆ. ಮೋದಿ ಅವರ ಸರ್ಕಾರವು ಅರ್ನಬ್ ಅವರನ್ನು ರಕ್ಷಿಸುತ್ತಿರುವುದು ಏಕೆ? ಬಿಜೆಪಿ ಪರವಾಗಿ ಅರ್ನಬ್ ಕೆಲಸ ಮಾಡುತ್ತಿದ್ದರು ಎಂದೇ? ಬಾಲಾಕೋಟ್ ದಾಳಿಯ ವಿವರವನ್ನು ಅರ್ನಬ್‌ಗೆ ನೀಡಿದವರು ಯಾರು? ಅರ್ನಬ್‌ನನ್ನು ತಕ್ಷಣವೇ ಬಂಧಿಸಬೇಕು ಮತ್ತು ರಿಪಬ್ಲಿಕ್ ಟಿವಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ಆಗ್ರಹಿಸಿದ್ದಾರೆ.
ಟಿಆರ್‌ಪಿ ತಿರುಚುವಿಕೆಗೆ ಸಂಬಂಧಿಸಿದಂತೆ ಆಳವಾದ ತನಿಖೆ ನಡೆಸಬೇಕು ಎಂದು ಎನ್‌ಸಿಪಿ ಮತ್ತು ಕಾಂಗ್ರೆಸ್ ಒತ್ತಾಯಿಸಿವೆ.
‘ತಿರುಚಲಾದ ರೇಟಿಂಗ್‌ಗಳನ್ನು ಆಧರಿಸಿ, ಮಹಾರಾಷ್ಟ್ರದ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸುವ ಕಾರ್ಯಸೂಚಿಯನ್ನು ಅರ್ನಬ್ ಹೊಂದಿದ್ದರು’ ಎಂದು ಎನ್‌ಸಿಪಿ ವಕ್ತಾರ ಮಹೇಶ್ ತಪಾಸೆ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.