ಲಖನೌ: ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ 22 ಜಿಲ್ಲೆಗಳ ಸುಮಾರು 1,500 ಗ್ರಾಮಗಳು ಪ್ರವಾಹ ಪರಿಸ್ಥಿತಿಗೆ ಒಳಗಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಮಳೆ ಸಂಬಂಧಿತ ಅವಘಡಗಳಿಂದಾಗಿ ಪ್ರತಾಪಗಢದಲ್ಲಿ ಇಬ್ಬರು ಹಾಗೂ ರಾಯ್‌ಬರೇಲಿ, ಸಿದ್ಧಾರ್ಥ್ ನಗರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮತ್ತೊಂದು ದುರ್ಘಟನೆಯಲ್ಲಿ ಹಾವು ಕಡಿದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ಹೇಳಿದೆ.
ರಾಮಗಂಗಾ, ರಾಪ್ತಿ, ಘಾಘ್ರಾ, ಬುಧಿ ರಾಪ್ತಿ, ರೋಹಿನ್ ಮತ್ತು ಕುವಾನೋ ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ ಎಂದು ಆಯುಕ್ತ ಜಿ.ಎಸ್. ನವೀನ್ ಹೇಳಿದ್ದಾರೆ.
ಉತ್ತರ ಪ್ರದೇಶದ ಜಿಲ್ಲೆಗಳಾದ ಲಖಿಂಪುರ ಖೇರಿ, ಬಲರಾಂಪುರ, ಕುಶಿನಗರ, ಶಹಜಹಾನ್‌ಪುರ, ಬಾರಾಬಂಕಿ, ಸೀತಾಪುರ್, ಗೊಂಡಾ, ಸಿದ್ಧಾರ್ಥನಗರ, ಬಲ್ಲಿಯಾ, ಗೋರಖ್‌ಪುರ್, ಬರೇಲಿ, ಅಜಂಗಢ, ಹರ್ದೋಯಿ, ಅಯೋಧ್ಯೆ, ಫರೂಕಾಬಾದ್, ಬಸ್ತಿ, ಡಿಯೋರಿಯಾ, ಉನ್ನಾವ್ ಸೇರಿದಂತೆ ಪಿಲಿಪಿತ್ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ ಎಂದು ನವೀನ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.