ಅಹಮದಾಬಾದ್: ಇಲ್ಲಿನ ವಿಮಾನ ನಿಲ್ದಾಣದಿಂದ ಭಾನುವಾರ ಬಂಧಿಸಲಾದ ನಾಲ್ವರು ಶಂಕಿತ ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಉಗ್ರರಲ್ಲಿ ಇಬ್ಬರು ಪ್ರತ್ಯೇಕವಾಗಿ, 38 ಮತ್ತು 40 ಬಾರಿ ಭಾರತದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಶಂಕಿತರಲ್ಲಿ ಮೂವರು ಮಾದಕ ದ್ರವ್ಯ ಮತ್ತು ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಪರಾಧದ ಹಿನ್ನೆಲೆ ಹೊಂದಿದ್ದಾರೆ. ಇವರಲ್ಲಿ ಒಬ್ಬಾತ ಮುಂಬೈ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ನುಸ್ರತ್ ಗನಿ 2022ರಿಂದ 2023 ರವರೆಗೆ 38 ಬಾರಿ ಭಾರತಕ್ಕೆ ಭೇಟಿ ನೀಡಿದ್ದರೆ, ಈತನ ಸಹಚರ ನಫ್ರಾನ್ 40 ಬಾರಿ ಭೇಟಿ ಕೊಟ್ಟಿದ್ದಾನೆ. ಇನ್ನಿಬ್ಬರು ಶಂಕಿತರಲ್ಲಿ ಮೊಹಮ್ಮದ್ ರಾಸ್ದೀನ್ ಮತ್ತು ಮೊಹಮ್ಮದ್ ಫಾರಿಸ್ ಮೊದಲ ಬಾರಿಗೆ ಭಾರತಕ್ಕೆ ಬಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಡಿಐಜಿ ಸುನೀಲ್ ಜೋಶಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಆಶ್ಚರ್ಯಕರ ಅಂಶವೆಂದರೆ, ಇವರು ಭಾರತಕ್ಕೆ ಪದೇ ಪದೇ ಬರುತ್ತಿದ್ದರೂ 2014ರ ಫೆಬ್ರುವರಿಯಿಂದ ಭೇಟಿ ನಿಲ್ಲಿಸಿದ್ದರು. ಇವರು ತಮ್ಮನ್ನು ನಿರ್ದೇಶಿಸುವ ಪಾಕಿಸ್ತಾನದ ಅಬು ಎಂಬುವನ ಜತೆಗೆ ಯಾವಾಗಿನಿಂದ ಸಂಪರ್ಕಕ್ಕೆ ಬಂದಿದ್ದರು ಮತ್ತು ಇವರ ಜತೆಗೆ ಯಾರೆಲ್ಲ ಸಂಪರ್ಕದಲ್ಲಿದ್ದರು ಹಾಗೂ ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಎನ್ನುವುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ’ ಎಂದು ಜೋಶಿ ಹೇಳಿದರು.
ಶಂಕಿತ ಎಲ್ಲ ನಾಲ್ವರು ಪಾಕಿಸ್ತಾನದ ಅಬು ಎಂಬಾತನ ಸೂಚನೆ ಮೇರೆಗೆ ಅಹಮದಾಬಾದ್‌ಗೆ ಬರಲು ಮೊದಲ ಬಾರಿಗೆ ಒಟ್ಟಿಗೆ ಪ್ರಯಾಣಿಸಿದ್ದಾರೆ. ಇವರು ಗಾಂಧಿನಗರ ಜಿಲ್ಲೆಯ ನಾನಾ ಚಿಲೋಡಾದಲ್ಲಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇರಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿ ಸಂಗ್ರಹಿಸಲಿದ್ದರು. ಶಸ್ತ್ರಾಸ್ತ್ರ ಇರಿಸಿದ್ದ ಸ್ಥಳ, ಅದರ ಕವರ್, ಇತರ ವಿವರಗಳನ್ನು ಒಳಗೊಂಡ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಎಟಿಎಸ್ ಹೇಳಿದೆ.
ಶ್ರೀಲಂಕಾ ಪ್ರಜೆಗಳಾದ ಈ ನಾಲ್ವರು ಶಂಕಿತರು ‘ಮುಸ್ಲಿಮರ ವಿರುದ್ಧದ ದೌರ್ಜನ್ಯ’ಕ್ಕಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರನ್ನು ಗುರಿಯಾಗಿಸಿ, ಪಾಕಿಸ್ತಾನದ ಅಬು ಎಂಬುವನ ನಿರ್ದೇಶನದ ಮೇರೆಗೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಯಸಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಎಟಿಎಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.