ಭುವನೇಶ್ವರ/ಕೋಲ್ಕತ್ತ:ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆಸಂಬಂಧಿಸಿ ಬಂಧನದಲ್ಲಿರುವ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಬೆಳಿಗ್ಗೆ ವೈದ್ಯಕೀಯ ಪರೀಕ್ಷೆಗಾಗಿ ಭುವನೇಶ್ವರಕ್ಕೆ ಕರೆದೊಯ್ದಿದ್ದು, ಏಮ್ಸ್‌ಗೆ ದಾಖಲಿಸಿದೆ.
ಕಲ್ಕತ್ತ ಹೈಕೋರ್ಟ್ ನಿರ್ದೇಶನದ ಮೇರೆಗೆಇ.ಡಿ ಅಧಿಕಾರಿಗಳು ಪಾರ್ಥ ಚಟರ್ಜಿ ಅವರನ್ನು ಬೆಳಿಗ್ಗೆ 9ರ ಸುಮಾರಿಗೆ ಕೋಲ್ಕತ್ತ ವಿಮಾನ ನಿಲ್ದಾಣದಿಂದ ಭುವನೇಶ್ವರಕ್ಕೆ ಏರ್ ಆಂಬುಲೆನ್ಸ್ ಮೂಲಕ ಕರೆದೊಯ್ದರು.
ಸಚಿವರು ಭುವನೇಶ್ವರಕ್ಕೆ ಬಂದಿಳಿದ ನಂತರ ಏಮ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‌ನಲ್ಲಿದಾಖಲಾದರು. ಅವರ ಆರೋಗ್ಯ ಪರೀಕ್ಷಿಸಿದ ಮೇಲೆ ವಿಶೇಷ ಕೊಠಡಿಗೆ ಸ್ಥಳಾಂತರಿಸಲಾಯಿತು ಎಂದುವೈದ್ಯಕೀಯ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಸಚಿವರನ್ನು ಎಸ್‌ಎಸ್‌ಕೆಎಂ ಸರ್ಕಾರಿ ಆಸ್ಪತ್ರೆಯಿಂದ ಆಂಬುಲೆನ್ಸ್‌ನಲ್ಲಿ ಗ್ರೀನ್ ಕಾರಿಡಾರ್ ಮೂಲಕ ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ 30 ನಿಮಿಷಗಳ ಅವಧಿಯಲ್ಲಿ ಕರೆದೊಯ್ಯಲಾಯಿತು.
ಕೋಲ್ಕತ್ತದ ಅಧೀನ ನ್ಯಾಯಾಲಯ ಸಚಿವರನ್ನುಸೋಮವಾರದವರೆಗೆ ಇ.ಡಿ ವಶಕ್ಕೆ ಒಪ್ಪಿಸಿತ್ತು.ಪಾರ್ಥ ಚಟರ್ಜಿ ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿ ಹಗರಣ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.