ADVERTISEMENT

370ನೇ ವಿಧಿ ಮರುಸ್ಥಾಪನೆ ನನ್ನ ಕೈಯಲಿಲ್ಲ, ಭರವಸೆ ನೀಡಲ್ಲ: ಗುಲಾಂ ನಬಿ ಆಜಾದ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2022, 16:09 IST
Last Updated 13 ಸೆಪ್ಟೆಂಬರ್ 2022, 16:09 IST
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್   

ಬೆಂಗಳೂರು: 370ನೇ ವಿಧಿ ನಮ್ಮ ಕೈಯಲ್ಲಿಲ್ಲದ ಕಾರಣ ಅದನ್ನು ಸಮಸ್ಯೆಯಾಗಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅನ್ನು ಇತ್ತೀಚೆಗೆ ತೊರೆದಿರುವ ಗುಲಾಂ ನಬಿ ಆಜಾದ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರದ್ದಾಗಿರುವ 370ನೇ ವಿಧಿಯನ್ನು ಪುನರ್ ಸ್ಥಾಪಿಸುವ ಬಗ್ಗೆ ಏನನ್ನು ಹೇಳಲು ಬಯಸುವುದಿಲ್ಲ. 77 ಸೀಟುಗಳನ್ನು 350ಕ್ಕೆ ಪರಿವರ್ತಿಸುವುದು ನನ್ನ ಕೈಯಲ್ಲಿಲ್ಲ. (ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ) ಆದೇ ರೀತಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭಿಸಿ ನಮ್ಮ ಪರವಾಗಿ ತೀರ್ಪು ನೀಡುವಂತೆ ಹೇಳಲು ನಾನು ಸಿದ್ಧನಿಲ್ಲ’ ಎಂದು ಹೇಳಿದ್ದಾರೆ.

ನನ್ನ ಕೈಯಲ್ಲಿಲ್ಲದ ಸಾಧ್ಯವಾಗದ ಯಾವುದರ ಬಗೆಯೂ ಭರವಸೆ ನೀಡಿಲ್ಲ ಎಂದು ಆಜಾದ್ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಇತ್ತೀಚೆಗಷ್ಟೇ ಜಮ್ಮು– ಕಾಶ್ಮೀರದಲ್ಲಿ ಬೃಹತ್‌ ರ‍್ಯಾಲಿ ನಡೆಸಿದ್ದ ಆಜಾದ್‌, ‘ಆಜಾದ್‌ಗೆ ಗೊತ್ತು ಯಾವುದು ಮಾಡಬಹುದು, ಯಾವುದು ಮಾಡಲಾಗದು ಎನ್ನುವುದು. ನಾನಾಗಲೀ, ಕಾಂಗ್ರೆಸ್ ಪಕ್ಷವಾಗಲೀ ಅಥವಾ ಮೂರು ಪ್ರಾದೇಶಿಕ ಪಕ್ಷಗಳಾಗಲೀ ನಿಮಗೆ 370ನೇ ವಿಧಿಯನ್ನು ಮರಳಿಸಲಾಗದು. ಟಿಎಂಸಿಯ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯಾಗಲೀ ಅಥವಾ ಡಿಎಂಕೆ– ಎನ್‌ಸಿಪಿಯ ಮುಖ್ಯಸ್ಥರಾಗಲೀ ಇದನ್ನು ಮರಳಿಸಲಾಗದು. ನನಗೆ ನಿಯಂತ್ರಣವಿರದ ವಿಚಾರಗಳ ಬಗ್ಗೆ ನಾನು ಪ್ರಸ್ತಾಪಿಸುವುದಿಲ್ಲ’ ಎಂದು ತಿಳಿಸಿದ್ದರು.

‘ನಾನು 370ನೇ ವಿಧಿಯ ಬಗ್ಗೆ ಪ್ರಸ್ತಾಪಿಸಿ ಚುನಾವಣಾ ರಾಜಕೀಯಕ್ಕಾಗಿ ಜನರನ್ನು ಮರಳು ಮಾಡುವುದಿಲ್ಲ. ನಾನು ನಿಮ್ಮನ್ನು (ಮತದಾರರನ್ನು) ದಾರಿ ತಪ್ಪಿಸುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡುವೆ. ಅಂಥ ಯಾವುದೇ ವಿಚಾರಗಳನ್ನಾಗಲೀ, ಘೋಷಣೆಗಳನ್ನಾಗಲೀ ನಾನು ಪ್ರಸ್ತಾಪಿಸುವುದಿಲ್ಲ’ ಎಂದು ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.