ADVERTISEMENT

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2023, 7:00 IST
Last Updated 11 ಡಿಸೆಂಬರ್ 2023, 7:00 IST
<div class="paragraphs"><p>ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಕುರಿತ ಆದೇಶ ಪ್ರಕಟಿಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು</p></div>

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಕುರಿತ ಆದೇಶ ಪ್ರಕಟಿಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು

   

ಪಿಟಿಐ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.

ADVERTISEMENT

ತೀರ್ಪು ಪ್ರಕಟಿಸುವ ವೇಳೆ, 'ಸಂವಿಧಾನದ 370 ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ರಾಷ್ಟ್ರಪತಿಯವರು ಸಾಂವಿಧಾನಿಕ ಆದೇಶ ಹೊರಡಿಸುವ ಅಧಿಕಾರ ಹೊಂದಿದ್ದಾರೆ' ಎಂದಿರುವ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, 'ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಶೀಘ್ರವೇ ಮರುಸ್ಥಾಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲಾಗುವುದು' ಎಂದು ಹೇಳಿದೆ.

'ಸುಪ್ರೀಂ' ಆದೇಶದ ಪ್ರಮುಖ ಅಂಶಗಳು
* ಸಂವಿಧಾನದ 370ನೇ ವಿಧಿ ಕುರಿತಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ಮಾನ್ಯವಾದದ್ದು

* ಜಮ್ಮು ಮತ್ತು ಕಾಶ್ಮೀರದಲ್ಲಿ ಘೋಷಿಸಲಾದ ರಾಷ್ಟ್ರಪತಿ ಆಳ್ವಿಕೆಯ ಸಿಂಧುತ್ವದ ಬಗ್ಗೆ ಅರ್ಜಿದಾರರು ಪ್ರಶ್ನಿಸದ ಕಾರಣ ಆ ಕುರಿತು ತೀರ್ಪು ನೀಡುವ ಅಗತ್ಯವಿಲ್ಲ 

* 370ನೇ ವಿಧಿಯು ರಾಜ್ಯದಲ್ಲಿ ಉಂಟಾಗಿದ್ದ ಯುದ್ಧದ ಪರಿಸ್ಥಿತಿಯಿಂದಾಗಿ ಜಾರಿಯಾದ ಮಧ್ಯಂತರ ವ್ಯವಸ್ಥೆ. ಅದು ತಾತ್ಕಾಲಿಕ ನಿಬಂಧನೆ ಎಂಬುದು ಒಕ್ಕಣೆಯಲ್ಲಿದೆ.

* 370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಒಕ್ಕೂಟದೊಂದಿಗೆ ಸಾಂವಿಧಾನಿಕವಾಗಿ ಒಗ್ಗೂಡಿಸುವ ಉದ್ದೇಶವನ್ನು ಹೊಂದಿತ್ತು. ಹಾಗಾಗಿ ರಾಷ್ಟ್ರಪತಿಯವರು ಅದು ಅಸ್ತಿತ್ವದಲ್ಲಿಲ್ಲ ಎಂದು ಘೋಷಿಸುವ ಅಧಿಕಾರ ಹೊಂದಿದ್ದಾರೆ.

* ಭಾರತಕ್ಕೆ ಸೇರ್ಪಡೆಯಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಆಂತರಿಕ ಸಾರ್ವಭೌಮತ್ವ ಉಳಿಯುವುದಿಲ್ಲ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ

* ಜಮ್ಮು ಮತ್ತು ಕಾಶ್ಮೀರ ಸಾಂವಿಧಾನಿಕ ಸಭೆಯ ಶಿಫಾರಸು ರಾಷ್ಟ್ರಪತಿಗಳಿಗೆ ಅನ್ವಯವಾಗುವುದಿಲ್ಲ

* 370 (1) (ಡಿ) ವಿಧಿಯ ಅನ್ವಯ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲ ನಿಬಂಧನೆಗಳನ್ನು ಅನ್ವಯಿಸಲು ರಾಜ್ಯ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ. ಹಾಗಾಗಿ, ರಾಷ್ಟ್ರಪತಿ ಅವರು ಕೇಂದ್ರ ಸರ್ಕಾರದ ತೀರ್ಮಾನವನ್ನು ಸಮ್ಮತಿಸಿರುವುದು ದುರುದ್ದೇಶದ ಕ್ರಮವಲ್ಲ.

* ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ 2024ರ ಸೆಪ್ಟೆಂಬರ್‌ 30ರ ಒಳಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಲಾಗುವುದು.

* ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಶೀಘ್ರವೇ ಮರುಸ್ಥಾಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲಾಗುವುದು

* ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವ ನಿರ್ಧಾರವನ್ನು ಕೋರ್ಟ್ ಎತ್ತಿ ಹಿಡಿದಿದೆ

* ರಾಷ್ಟ್ರಪತಿಯವರ ಅಧಿಕಾರ ಚಲಾಯಿಸಲು ಸಮಾಲೋಚನೆ ನಡೆಸುವ ಅಗತ್ಯವಿಲ್ಲ

* ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಇತರ ರಾಜ್ಯಗಳೊಂದಿಗೆ ಸಮಾನವಾಗಿಸುವುದು 370ನೇ ವಿಧಿಯ ಉದ್ದೇಶವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.