ನವದೆಹಲಿ: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ 2019ರ ಆ.5 ಹಾಗೂ ಆ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಈ ದಿನ (2023 ಡಿ. 12) ದೇಶದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿರಲಿದೆ. ವಿಶೇಷ ಸ್ಥಾನಮಾನ ರದ್ದು ಮಾಡಿದ್ದಕ್ಕಾಗಿ ದೇಶವು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಋಣಿಯಾಗಿರಲಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.
370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಕುರಿತು ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಪ್ರಕರಣ ಸಂಬಂಧ ಕೇಂದ್ರ ಸರ್ಕಾರದ ಪರವಾಗಿ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.
‘2019ರ ಆಗಸ್ಟ್ 5ರಂದು 370ನೇ ವಿಧಿಯಡಿ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಪ್ರಕ್ರಿಯೆಯಲ್ಲಿದ್ದ ಏಕೈಕ ವಕೀಲನಾಗಿ ಹಾಗೂ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದೆ ವಾದ ಮಂಡಿಸಿದವನಾಗಿ ನನಗೂ ಇದು ಐತಿಹಾಸಿಕ ದಿನ’ ಎಂದು ಮೆಹ್ತಾ ಸಂತೋಷ ವ್ಯಕ್ತಪಡಿಸಿದ್ದಾರೆ.
‘2019ರ ಆಗಸ್ಟ್ 5 ಹಾಗೂ ಇವತ್ತಿನ ದಿನ ಭಾರತದ ಇತಿಹಾಸದಲ್ಲಿ ಉಳಿಯಲಿದೆ. ಹಿಮಾಲಯದ (ಜಮ್ಮು ಮತ್ತು ಕಾಶ್ಮೀರದ) ಸಂವಿಧಾನದ ದೈತ್ಯ ಪ್ರಮಾದವನ್ನು ಸರ್ಕಾರ ಕೊನೆಗೂ ಸರಿಪಡಿಸಿತು’ ಎಂದು ಅವರು ಹೇಳಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿಯವರ ಉಕ್ಕಿನ ಇಚ್ಛಾಶಕ್ತಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ದೃಢ ನಿರ್ಧಾರ ಮತ್ತು ಅದ್ಭುತ ತಂತ್ರಗಾರಿಕೆಯಿಂದಾಗಿ ಈ ನಿರ್ಧಾರ ಸಾಧ್ಯವಾಯಿತು. ದೇಶವು ಯಾವತ್ತೂ ಅವರಿಗೆ ಋಣಿಯಾಗಿರಲಿದೆ’ ಎಂದು ನುಡಿದಿದ್ದಾರೆ.
ಇಡೀ ಪ್ರಕರಣದಲ್ಲಿ ಭಾಗಿಯಾಗಿರುವುದು ನನ್ನ ಅದೃಷ್ಟ ಎಂದ ಅವರು, ಪ್ರಕರಣದ ವಿಚಾರಣೆ ವೇಳೆ ಸಂವಿಧಾನಿಕ ಪೀಠವು ನಮ್ಮ ವಾದವನ್ನು ತಾಳ್ಮೆಯಿಂದ ಆಲಿಸಿದೆ. ಸುಪ್ರೀಂ ಕೋರ್ಟ್ ಸಾಂವಿಧಾನಿಕ ಮೌಲ್ಯಗಳ ಪರವಾಗಿ ನಿಂತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.