ನವದೆಹಲಿ: ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಪುಣ್ಯ ತಿಥಿಯಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಅವರಿಗೆ ಗೌರವ ಸಲ್ಲಿಸಿದ್ದಾರೆ.
‘ಕಳೆದ ವರ್ಷ ಈ ದಿನ ನಾವು ಅರುಣ್ ಜೇಟ್ಲಿ ಅವರನ್ನು ಕಳೆದುಕೊಂಡೆವು. ನನ್ನ ಸ್ನೇಹಿತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅರುಣ್ ಜೀ ಶ್ರದ್ಧೆಯಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದರು. ಅವರ ಬುದ್ಧಿಶಕ್ತಿ, ಕುಶಾಗ್ರಮತಿ ಮತ್ತು ವ್ಯಕ್ತಿತ್ವ ಗಮನಾರ್ಹವಾದದ್ದಾಗಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಅರುಣ್ ಜೇಟ್ಲಿ ಅವರೊಬ್ಬ ಅತ್ಯುತ್ತಮ ರಾಜಕಾರಣಿ. ಭಾರತದ ರಾಜಕಾರಣದಲ್ಲಿ ಅವರು ಸಾಟಿಯಿಲ್ಲದ ನಾಯಕ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.
ಜೇಟ್ಲಿ ಅವರ ಪುಣ್ಯ ತಿಥಿ ಸಂದರ್ಭದಲ್ಲಿ ಟ್ವೀಟ್ ಮೂಲಕ ಗೌರವ ಸಲ್ಲಿಸಿರುವ ಶಾ, ‘ಉತ್ತಮ ನಾಯಕ, ಭಾರತ ರಾಜಕೀಯದಲ್ಲಿ ಸಾಟಿಯಿಲ್ಲದ ವ್ಯಕ್ತಿ, ಚತರ ವಾಗ್ಮಿ ಹಾಗೂ ಅತ್ಯುತ್ತಮ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಅರುಣ್ ಜೇಟ್ಲಿ ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರು ಬಹುಮುಖಿ ಮತ್ತು ಸ್ನೇಹಿತರ ಸ್ನೇಹಿತರಾಗಿದ್ದವರು. ಅತ್ಯುನ್ನತ ಪರಂಪರೆ, ಪರಿವರ್ತಕ ದೃಷ್ಟಿಕೋನ ಮತ್ತು ದೇಶದ ಮೇಲಿನ ಭಕ್ತಿಗಾಗಿ ಅವರು ಯಾವತ್ತೂ ನೆನಪಿನಲ್ಲುಳಿಯುತ್ತಾರೆ’ ಎಂದು ಉಲ್ಲೇಖಿಸಿದ್ದಾರೆ.
ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್, ಮುಖ್ತಾರ್ ಅಬ್ಬಾಸ್ ನಖ್ವಿ ಸಹ ಅರುಣ್ ಜೇಟ್ಲಿ ಅವರಿಗೆ ಗೌರವ ಸಲ್ಲಿಸಿ ಟ್ವೀಟ್ ಮಡಿದ್ದಾರೆ.
ದಿ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಮೊದಲ ಬಾರಿಗೆ ಜೇಟ್ಲಿ ಸಚಿವರಾಗಿದ್ದರು. 2009ರಲ್ಲಿ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಸಚಿವರಾಗಿದ್ದರು. ಅನಾರೋಗ್ಯದ ಕಾರಣ ನೀಡಿ 2019ರ ಚುನಾವಣೆಯಿಂದ ದೂರವುಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.