ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಇಂದು (ಶನಿವಾರ) ಜಾಮೀನು ಮಂಜೂರು ಮಾಡಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ನ್ಯಾಯಾಲಯವು ₹10 ಸಾವಿರದ ಬಾಂಡ್ ಮತ್ತು ₹1 ಲಕ್ಷ ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ ಎಂದು ವರದಿಯಾಗಿದೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್‌ಗೆ ಇ.ಡಿ ಅಧಿಕಾರಿಗಳು ಈವರೆಗೆ ಎಂಟು ಸಮನ್ಸ್‌ಗಳನ್ನು ಜಾರಿಗೊಳಿಸಿದ್ದರು. ಆದರೆ, ಕೇಜ್ರಿವಾಲ್ ಅವರು ಇ.ಡಿ ವಿಚಾರಣೆ ಹಾಜರಾಗದೆ ಸಮನ್ಸ್‌ಗಳನ್ನು ಕೈಬಿಟ್ಟಿದ್ದರು.
ಸಮನ್ಸ್‌ಗಳನ್ನು ಕೈಬಿಟ್ಟಿದ್ದಕ್ಕಾಗಿ, ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಇ.ಡಿ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯಕ್ಕೆ ಎರಡು ದೂರು ದಾಖಲಿಸಿತ್ತು.
ಈ ವಿಚಾರದಲ್ಲಿ ತನ್ನ ವಾದ ಮುಕ್ತಾಯಗೊಳಿಸಿರುವುದಾಗಿ ಇ.ಡಿ ಕೋರ್ಟ್‌ಗೆ ಹೇಳಿಕೆ ಸಲ್ಲಿಸಿದ ಬಳಿಕ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದರು. 5ನೇ ನೋಟಿಸ್‌ಗೂ ಕೇಜ್ರಿವಾಲ್ ಗೈರಾದ ನಂತರ ಅವರ ವಿರುದ್ಧ ಇ.ಡಿ ಫೆ.3ರಂದು ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು.
ಆಮ್ ಆದ್ಮಿ ಪಕ್ಷದ ಎಎಪಿ ಸಂಚಾಲಕರೂ ಆದ ಕೇಜ್ರಿವಾಲ್ ಅವರು ಈ ಹಿಂದೆ ‘ಈ ಸಮನ್ಸ್‌ಗಳು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ. ಚುನಾವಣಾ ಪ್ರಚಾರಕ್ಕೆ ಹೋಗದಂತೆ ನನ್ನನ್ನು ತಡೆಯುವ ಉದ್ದೇಶದಿಂದ ಸಮನ್ಸ್ ನೀಡಲಾಗಿದೆ’ ಎಂದು ಆರೋಪಿಸಿ ಇ.ಡಿಗೆ ಪತ್ರ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.