ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯ ಅಧಿಕೃತ ನಿವಾಸವನ್ನು ಶುಕ್ರವಾರ ಖಾಲಿ ಮಾಡಿದ್ದು, ಲುಟ್ಯೆನ್ಸ್ ವಲಯದಲ್ಲಿರುವ ಬಂಗಲೆಗೆ ವಾಸ್ತವ್ಯ ಬದಲಿಸಿದ್ದಾರೆ.
ಫ್ಲ್ಯಾಗ್‌ಸ್ಟ್ಯಾಫ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ಕೇಜ್ರಿವಾಲ್ ಕಳೆದ ಒಂಬತ್ತು ವರ್ಷಗಳಿಂದ ನೆಲಸಿದ್ದರು. ಅವರು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನವರಾತ್ರಿ ಅವಧಿಯಲ್ಲಿ ಮುಖ್ಯಮಂತ್ರಿ ನಿವಾಸ ಖಾಲಿ ಮಾಡುವುದಾಗಿ ಅವರು ಈ ಹಿಂದೆಯೇ ಹೇಳಿದ್ದರು.
ಕೇಜ್ರಿವಾಲ್ ಮತ್ತು ಅವರ ಪತ್ನಿ, ಮಗ, ಮಗಳು ಹಾಗೂ ಪೋಷಕರು ಸೇರಿದಂತೆ ಅವರ ಕುಟುಂಬ ಸದಸ್ಯರು ಫಿರೋಜ್‌ಶಾ ರಸ್ತೆ ಮಂಡಿ ಹೌಸ್ ಬಳಿಯ ಬಂಗಲೆಗೆ ಸ್ಥಳಾಂತರಗೊಂಡರು. ಈ ಬಂಗಲೆಯನ್ನು ಪಂಜಾಬ್‌ನ ಎಎಪಿಯ ರಾಜ್ಯಸಭಾ ಸದಸ್ಯ ಅಶೋಕ್ ಮಿತ್ತಲ್ ಅವರಿಗೆ ನೀಡಲಾಗಿತ್ತು. ಪೂಜಾ ಕಾರ್ಯಕ್ರಮದ ನಂತರ ಹೊಸ ಮನೆಗೆ ಕೇಜ್ರಿವಾಲ್ ಕುಟುಂಬ ‘ಗೃಹ ಪ್ರವೇಶ’ ಮಾಡಿತು.
ಇದಕ್ಕೂ ಮೊದಲು ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರು, ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯ ಒಡೆತನದ ಫ್ಲಾಗ್‌ಸ್ಟಾಫ್ ಬಂಗಲೆಯ ಕೀಲಿಕೈಗಳನ್ನು ಸರ್ಕಾರಿ ಅಧಿಕಾರಿಗೆ ಹಸ್ತಾಂತರಿಸಿದರು.
ಮುಖ್ಯಮಂತ್ರಿ ನಿವಾಸ ತೊರೆಯುವಾಗ ಕೇಜ್ರಿವಾಲ್ ಕುಟುಂಬವನ್ನು ನಿವಾಸದ ಸಿಬ್ಬಂದಿ ಭಾವುಕವಾಗಿ ಬೀಳ್ಕೊಟ್ಟರು. ಕೇಜ್ರಿವಾಲ್ ಅವರು ಸಿಬ್ಬಂದಿಯನ್ನು ಪ್ರೀತಿಯಿಂದ ಆಲಿಂಗಿಸಿಕೊಂಡು ವಿದಾಯ ಹೇಳಿದರು.
ಕೇಜ್ರಿವಾಲ್ ಕುಟುಂಬದ ಗೃಹೋಪಯೋಗಿ ವಸ್ತುಗಳನ್ನು ಎರಡು ಮಿನಿ ಟ್ರಕ್‌ಗಳಲ್ಲಿ ಬಂಗಲೆಗೆ ಸಾಗಿಸಲಾಗಿದೆ ಎಂದು ಎಎಪಿ ಮುಖಂಡರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.