ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಶುಕ್ರವಾರ ಬೆಳಿಗ್ಗೆ ಸಿಬಿಐ ದಾಳಿ ನಡೆದಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ದೆಹಲಿ ಮಾದರಿಯನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರ ಮನೆ ಸಹಿತ ದೆಹಲಿ ಎನ್‌ಸಿಆರ್‌ನ 21 ಸ್ಥಳಗಳಲ್ಲಿ ದಾಳಿ ನಡೆಸಿರುವ ಸಿಬಿಐ, ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ದೆಹಲಿಯ ಶಿಕ್ಷಣ ಹಾಗೂ ಆರೋಗ್ಯ ಮಾದರಿಯನ್ನು ಇಡೀ ಜಗತ್ತೇ ಚರ್ಚಿಸುತ್ತಿದೆ. ಕೇಂದ್ರ ಸರ್ಕಾರವು ಅದನ್ನು ತಡೆಯಲು ಪ್ರಯತ್ನಿಸುತ್ತಿದೆ. ಕಳೆದ 75 ವರ್ಷಗಳಲ್ಲಿ ಒಳ್ಳೆಯ ಕೆಲಸ ಮಾಡಲು ಯತ್ನಿಸಿದವರನ್ನು ದಮನಿಸಲಾಗಿದೆ. ಅದಕ್ಕಾಗಿಯೇ ಭಾರತ ಹಿಂದುಳಿದಿದೆ. ದೆಹಲಿಯಲ್ಲಿ ಉತ್ತಮ ಕೆಲಸವನ್ನು ನಿಲ್ಲಿಸಲು ನಾವು ಬಿಡಲಾರೆವು ಎಂದು ಹೇಳಿದ್ದಾರೆ.
ಅಮೆರಿಕದ ಅತಿದೊಡ್ಡ ಪತ್ರಿಕೆ 'ನ್ಯೂಯಾರ್ಕ್ ಟೈಮ್ಸ್', ದೆಹಲಿಯ ಶಿಕ್ಷಣ ಮಾದರಿಯನ್ನು ಹೊಗಳಿದ್ದಲ್ಲದೆ ಮನೀಶ್ ಸಿಸೋಡಿಯಾ ಚಿತ್ರವನ್ನು ಪ್ರಕಟಿಸಿದೆ. ಅದೇ ದಿನ ಮನೀಶ್ ಅವರ ಮನೆಗೆ ಕೇಂದ್ರವು ಸಿಬಿಐ ಅನ್ನು ಕಳುಹಿಸಿದೆ. ಸಿಬಿಐಗೆ ಸ್ವಾಗತ. ನಾವು ಸಂಪೂರ್ಣ ಸಹಕಾರ ನೀಡಲಿದ್ದೇವೆ. ಈ ಹಿಂದೆಯು ಅನೇಕ ದಾಳಿ ನಡೆದಿದೆ. ಆದರೆ ಏನೂ ಬಯಲಾಗಿಲ್ಲ. ಈಗಲೂ ಕೂಡಾ ಏನೂ ಸಾಬೀತುಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಸಿಬಿಐ ದಾಳಿಯನ್ನು ಸ್ವಾಗತಿಸಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡಾ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೆಹಲಿಯ ಅತ್ಯುತ್ತಮ ಕೆಲಸದಿಂದಾಗಿ ಅವರೆಲ್ಲರೂ ಚಿಂತಿತರಾಗಿದ್ದಾರೆ. ನಮ್ಮ ದೇಶದಲ್ಲಿ ಉತ್ತಮ ಕೆಲಸ ಮಾಡುವವರಿಗೆ ಕಿರುಕುಳ ನೀಡುತ್ತಿರುವುದು ತುಂಬಾ ಬೇಸರದ ಸಂಗತಿ. ಅದಕ್ಕಾಗಿಯೇ ಭಾರತ ನಂ.1 ಆಗಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.