ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟದ ಪರವಾಗಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಗುರುವಾರ ತಿಳಿಸಿವೆ.
ಕೇಜ್ರಿವಾಲ್ ಅವರು ಮಹಾ ವಿಕಾಸ ಅಘಾಡಿಯ ಮಿತ್ರ ಪಕ್ಷಗಳಾದ ಶಿವಸೇನಾ (ಯುಬಿಟಿ) ಹಾಗೂ ಎನ್‌ಸಿಪಿ (ಎಸ್‌ಪಿ) ಪರವಾಗಿ ವಿಶೇಷ ಪ್ರಚಾರ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ಇದೇ ಮೈತ್ರಿಕೂಟದ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದೆಯೇ ಎಂಬುದು ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಮಾಡುವಂತೆ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ(ಎಸ್‌ಪಿ) ಕೇಜ್ರಿವಾಲ್ ಅವರನ್ನು ಸಂಪರ್ಕಿಸಿವೆ.
ಜಾರ್ಖಂಡ್‌ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಪರ ಕೇಜ್ರಿವಾಲ್ ಪ್ರಚಾರ ನಡೆಸಲಿದ್ದಾರೆ. ಪ್ರಚಾರದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಎಎಪಿ ಹೇಳಿದೆ.
ಎಎಪಿಯು ಲೋಕಸಭೆ ಚುನಾವಣೆಗೆ ಮೊದಲು ರಚಿಸಲಾದ ಇಂಡಿಯಾ ಮೈತ್ರಿ ಕೂಟದ ಭಾಗವಾಗಿದೆ. ಲೋಕಸಭೆ ಚುನಾವಣೆಯಲ್ಲಿ ದೆಹಲಿ, ಗುಜರಾತ್ ಮತ್ತು ಹರಿಯಾಣದಲ್ಲಿ ಇಂಡಿಯಾ ಕೂಟದ ಪ್ರಮುಖ ಪಕ್ಷ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತು. ಆದರೆ ಇತ್ತೀಚೆಗೆ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿತ್ತು.
ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದೆ. ಜಾರ್ಖಂಡ್‌ನಲ್ಲಿ ಎರಡು ಹಂತಗಳಲ್ಲಿ (ನವೆಂಬರ್ 13 ಹಾಗೂ 20) ಮತದಾನ ಜರುಗಲಿದೆ.
ನವೆಂಬರ್ 23ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.