ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇದರೊಂದಿಗೆ ಸಂಪುಟದ 6 ಜನ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹಳೆಯ ತಂಡದಲ್ಲಿದ್ದ ಉಪಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್ ಮತ್ತು ರಾಜೇಂದ್ರ ಗೌತಮ್ ಅವರು ಈ ಬಾರಿಯು ಕೂಡ ಕೇಜ್ರಿವಾಲ್ ಅವರ ಸಂಪುಟದಲ್ಲಿ ಸಚಿವರಾಗಿ ಸ್ಥಾನ ಪಡೆದಿದ್ದಾರೆ.
ಇನ್ನು ಶುಕ್ರವಾರವಷ್ಟೇ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಧಿಕೃತವಾಗಿ ನೇಮಕ ಮಾಡಿದ್ದರು. ಅಲ್ಲದೆ ಮುಖ್ಯಮಂತ್ರಿಗಳ ಸಲಹೆ ಮೇರೆಗೆ ಇತರೆ ಆರು ಶಾಸಕರನ್ನು ಕೂಡ ದೆಹಲಿ ಸರ್ಕಾರದ ಸಚಿವರನ್ನಾಗಿ ನೇಮಕ ಮಾಡಿದ್ದರು.
ಮನೀಷ್ ಸಿಸೋಡಿಯಾ
ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಮನೀಷ್ ಸಿಸೋಡಿಯಾ ಅವರು, ಜೀ ನ್ಯೂಸ್ ಮತ್ತು ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸ ಮಾಡಿದ್ದಾರೆ. ಸರ್ಕಾರೇತರ ಸಂಸ್ಥೆಯಾಗಿದ್ದ ಪರಿವರ್ತನದ ಸಕ್ರಿಯ ಕಾರ್ಯಕರ್ತರಾಗಿದ್ದರು. 2011ರಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನ 'ಭ್ರಷ್ಟಾಚಾರದ ವಿರುದ್ಧ ಭಾರತ'ದ ಸದಸ್ಯರಾಗಿದ್ದರು. ಬಳಿಕ ಆಮ್ ಆದ್ಮಿ ಪಕ್ಷದ ರಾಜಕೀಯ ಸಂಬಂಧ ಸಮಿತಿ ಸದಸ್ಯರಾಗುತ್ತಾರೆ. ಎಎಪಿಯಿಂದಲೇ ಡಿಸೆಂಬರ್ 2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದರು. ಇದೀಗ ಎರಡನೇ ಬಾರಿಗೆ ಲಕ್ಷ್ಮಿ ಪತಪರಗಂಜ್ ಕ್ಷೇತ್ರದಿಂದ 3000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಅರವಿಂದ ಕೇಜ್ರಿವಾಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ.
ಸತ್ಯೇಂದ್ರ ಕುಮಾರ್ ಜೈನ್
ಅರವಿಂದ ಕೇಜ್ರಿವಾಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದ 55 ವರ್ಷದ ಸತ್ಯಂದ್ರ ಜೈನ್ ಇದೀಗ ಎರಡನೇ ಬಾರಿಯೂ ಆಮ್ ಆದ್ಮಿ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಆರ್ಕಿಟೆಕ್ಚರ್ ಸಲಹೆಗಾರರಾಗಿರುವ ಶಾಕುರ್ ಬಸ್ತಿ ಕ್ಷೇತ್ರದಿಂದ ಆಮ್ ಆದ್ಮಿ ಶಾಸಕನಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಸತ್ಯೇಂದರ್ ಜೈನ್ ಅವರನ್ನು 2018ರ ಏಪ್ರಿಲ್‌ನಲ್ಲಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪ್ರಶ್ನಿಸಿತ್ತು. ಅಲ್ಲದೆ ಸರ್ಕಾರಿ ಸಂಸ್ಥೆಗೆ ಸಲಹೆಗಾರರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಉಲ್ಲಂಘನೆ ಆರೋಪದ ಮೇಲೆ 2018 ರ ಮೇನಲ್ಲಿ ಸಿಬಿಐ ಅವರ ಮೇಲೆ ದಾಳಿ ನಡೆಸಿತ್ತು. ಕೇಂದ್ರ ಲೋಕೋಪಯೋಗಿ ಇಲಾಖೆಯಲ್ಲಿ (ಸಿಪಿಡಬ್ಲ್ಯುಡಿ) ಕಾರ್ಯನಿರ್ವಹಿಸುತ್ತಿದ್ದ ಅವರು ಇಲಾಖೆಯಲ್ಲಿನ ಭ್ರಷ್ಟಾಚಾರದಿಂದಾಗಿ ವೃತ್ತಿಯನ್ನು ತ್ಯಜಿಸಿದರು. ಬಳಿಕ ಜನ ಲೋಕಪಾಲ್ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಸಮಾಜ ಸೇವಕರಾಗಿದ್ದ ಅವರು, ಚಿತ್ರಕೂಟ್ ಮೂಲದ ಸಾಮಾಜಿಕ ಸಂಘಟನೆ 'ದೃಷ್ಟಿ'ಯಲ್ಲಿ ದೃಷ್ಟಿಹೀನ ಬಾಲಕಿಯರಿಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದರು.
ಗೋಪಾಲ್ ರೈ
ಕಳೆದ ಬಾರಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಗೋಪಾಲ್ ರೈ ಅವರು, ಖ್ಯಾತ ಸಾಮಾಜಿಕ ಕಾರ್ಯಕರ್ತ ಮತ್ತು ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿದ್ದಾರೆ. ಲಖನೌ ವಿಶ್ವವಿದ್ಯಾಲಯದಲ್ಲಿ 1998ರಲ್ಲಿ ಸಮಾಜ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 1992ರಲ್ಲಿ ಲಖನೌ ವಿಶ್ವವಿದ್ಯಾಲಯದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಲಿಬರೇಷನ್‌ನ ವಿದ್ಯಾರ್ಥಿ ಘಟಕವಾದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್‌ನೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಾಬರ್‌ಪುರ ಕ್ಷೇತ್ರದಿಂದ 25,723 ಮತಗಳನ್ನು ಪಡೆಯುವುದರೊಂದಿಗೆ ಸೋಲು ಕಂಡ ರೈ, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಬಳಿಕ 2015ರಲ್ಲಿ ನಡೆದ ಚುನಾವಣೆಯಲ್ಲಿ ಬಾಬರ್‌ಪುರ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾದರು ಮತ್ತು 2015ರಲ್ಲಿ ಸಚಿವರಾಗಿ ಅರವಿಂದ ಕೇಜ್ರಿವಾಲ್ ಸಂಪುಟ ಸೇರಿದರು. ಇದೀಗ ಬಾಬರ್‌ಪುರ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕೈಲಾಶ್ ಗೆಹ್ಲೋಟ್
ನಜಾಫ್‌ಗರ್‌ನ ಗ್ರಾಮೀನ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಕೈಲಾಶ್ ಗೆಹ್ಲೋಟ್ ಅವರು, ವೃತ್ತಿಯಲ್ಲಿ ವಕೀಲರು. ಅವರು ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ 16 ವರ್ಷ ಕಾನೂನು ಅಭ್ಯಾಸ ಮಾಡಿದ್ದಾರೆ. 2005 - 2007ರ ಅವಧಿಗೆ ದೆಹಲಿ ಹೈಕೋರ್ಟ್‌ನ ಬಾರ್ ಅಸೋಸಿಯೇಷನ್‌ನ ಸದಸ್ಯರಾಗಿ ಆಯ್ಕೆಯಾದರು. ಗೆಹ್ಲೋಟ್ ಅವರು ತನ್ನ ತಂದೆಯ ಹೆಸರಿನ ಟ್ರಸ್ಟ್ ಅನ್ನು ಕೂಡ ನಡೆಸುತ್ತಿದ್ದು, ಇದು ನಜಾಫ್‌ಗರ್‌ನಲ್ಲಿ ಕಳೆದ ಎರಡು ದಶಕಗಳಲ್ಲಿ ಗುಣಮಟ್ಟದ ಪ್ರಾಥಮಿಕ, ಪ್ರೌಢ, ವೃತ್ತಿಪರ ಮತ್ತು ಉನ್ನತ ಶಿಕ್ಷಣವನ್ನು ನೀಡಲು ಹಲವು ಕ್ರಮಗಳನ್ನು ಕೈಗೊಂಡಿದೆ. ನಜಾಫ್‌ಗರ್‌ನ ಶ್ರೀಮಂತ ಭೂಮಾಲೀಕರಾಗಿದ್ದ ಗೆಹ್ಲೋಟ್ ಅವರು, 2017ರ ಮೇನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಎರಡನೇ ಬಾರಿ ಎಎಪಿ ಸರ್ಕಾರದಲ್ಲಿ ಸಚಿವರಾಗಿ ಸೇರ್ಪಡೆಯಾಗಿದ್ದಾರೆ.
ಇಮ್ರಾನ್ ಹುಸೇನ್
ದೆಹಲಿಯ ಬಲ್ಲಿಮಾರನ್ ಕ್ಷೇತ್ರದಿಂದ ಸ್ಪರ್ಧಿಸಿ ಇಮ್ರಾನ್ ಹುಸೇನ್ ಅವರು ಗೆಲುವು ಸಾಧಿಸಿದ್ದಾರೆ. ಮೊದಲ ಬಾರಿಗೆ ಕೇಜ್ರಿವಾಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ಅವರು ಈ ಬಾರಿಯೂ ಸಚಿವ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2012ರ ಏಪ್ರಿಲ್‌ನಲ್ಲಿ ರಾಷ್ಟ್ರೀಯ ಲೋಕ ದಳ ಪಕ್ಷದಿಂದ ಬಲ್ಲಿಮಾರನ್ ಕ್ಷೇತ್ರದ ಕೌನ್ಸಿಲರ್ ಚುನಾವಣೆಯಲ್ಲಿ ಇಮ್ರಾನ್ ಹುಸೇನ್ ಸ್ಪರ್ಧಿಸಿ ಗೆದ್ದರು. ನಂತರ ಆಮ್ ಆದ್ಮಿ ಪಕ್ಷದ ಸದಸ್ಯರಾದ ಅವರು, 2015ರ ದೆಹಲಿ ಚುನಾವಣೆಯಲ್ಲಿ ವಿಜಯ ಸಾಧಿಸಿ ಕೇಜ್ರಿವಾಲ್ ಸಂಪುಟದಲ್ಲಿ ಸಚಿವರಾದರು. ಇದೀಗ ಎಎಪಿಯಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ರಾಜೇಂದ್ರ ಪಾಲ್ ಗೌತಮ್
ದೆಹಲಿಯಲ್ಲಿ ಜನಿಸಿದ ರಾಜೇಂದ್ರ ಪಾಲ್ ಗೌತಮ್ ಅವರು, ದೆಹಲಿ ವಿಶ್ವವಿದ್ಯಾಲಯದಿಂದ ಎಲ್ಎಲ್.ಬಿ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಇವರು, 2014ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.ಆಮ್ ಆದ್ಮಿ ಪಕ್ಷದಿಂದ ಟಿಕೆಟ್ ಪಡೆದು ಸೀಮಾಪುರಿ ಕ್ಷೇತ್ರದಿಂದ ದೆಹಲಿ 6ನೇ ವಿಧಾನಸಭೆಯ ಶಾಸಕರಾಗಿ 2015ರಲ್ಲಿ ಆಯ್ಕೆಯಾದರು. ಬಳಿಕ ಕೇಜ್ರಿವಾಲ್ ಸಂಪುಟದಲ್ಲಿ ಸಚಿವರಾಗಿದ್ದರು. ಇದೀಗ ಮತ್ತೆ ಎರಡನೇ ಬಾರಿಗೆ ಎಎಪಿ ಸರ್ಕಾರದ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.