ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರೆ.
‘ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅಗತ್ಯ ಬಿದ್ದರೆ ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆ. ಪ್ರಕರಣದಲ್ಲಿ ಅವರು ದೋಷಿ ಎಂದು ಸಾಬೀತಾಗಿಲ್ಲ. ಜೈಲಿನಿಂದ ಸರ್ಕಾರ ನಡೆಸಕೂಡದು ಎಂದು ನಿರ್ಬಂಧಿಸುವ ಯಾವುದೇ ಕಾನೂನುಗಳು ಇಲ್ಲ. ಹೀಗಾಗಿ ಅವರು ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆ’ ಎಂದು ಹೇಳಿದ್ದಾರೆ.
ದೆಹಲಿ ಅಬಕಾರಿ ಹಗರಣದ ಜೊತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ರಾತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ.ಈ ಮೂಲಕ ಕೇಜ್ರಿವಾಲ್ ಅವರು, ಸ್ವಾತಂತ್ರ್ಯ ನಂತರದಲ್ಲಿ ಬಂಧನಕ್ಕೆ ಒಳಗಾದ ಮೊದಲ ಹಾಲಿ ಮುಖ್ಯಮಂತ್ರಿ ಎನಿಸಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನವೇ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ಬಹುದೊಡ್ಡ ಸಂಚಿನ ಭಾಗ ಎಂದು ಎಎಪಿ ಆರೋಪಿಸಿದೆ. ಅಲ್ಲದೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಜಾರಿ ನಿರ್ದೇಶನಾಲಯವು ರಾಜಕೀಯ ಅಸ್ತ್ರವಾಗಿದೆ ಎಂದು ಕಿಡಿ ಕಾರಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆಮ್ ಆದ್ಮಿ ಪಕ್ಷವು, ‘ಕ್ರಾಂತಿಯ ಜ್ಯೋತಿಗಳನ್ನು ಹಿಡಿಯಿರಿ. ಸಂಪೂರ್ಣ ಕ್ರಾಂತಿಯ ಸಮಯ ಬಂದಿದೆ. ದೇಶವನ್ನು ತುಳಿಯುತ್ತಿರುವ ಸರ್ವಾಧಿಕಾರಿ ಸರ್ಕಾರವನ್ನು ಉರುಳಿಸುವ ಸಮಯ ಬಂದಿದೆ’ ಎಂದು ಬರೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.