ಚಂಡೀಗಢ: ದೆಹಲಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕರೂ ಆದ ಅರವಿಂದ ಕೇಜ್ರಿವಾಲ್ ಅವರ ಮೇಲೆ ಎಷ್ಟೇ ದೌರ್ಜನ್ಯ ನಡೆದರೂ ಅವರು ಎಂದಿಗೂ ತಲೆಬಾಗುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಹೇಳಿದ್ದಾರೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಆಪಾದಿತರಾದ ದೆಹಲಿ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದ ಒಂದು ದಿನದ ನಂತರ ಮಾನ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಕೇಜ್ರಿವಾಲ್ ಅವರ ಚಿತ್ರವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮಾನ್, ‘ಈ ಚಿತ್ರವು ಸರ್ವಾಧಿಕಾರದ ವಿರುದ್ಧದ ಹೋರಾಟವನ್ನು ಪ್ರತಿನಿಧಿಸುತ್ತದೆ. ನೀವು ಎಷ್ಟೇ ದೌರ್ಜನ್ಯ ಮಾಡಿದರೂ ಕೇಜ್ರಿವಾಲ್ ತಲೆಬಾಗುವುದಿಲ್ಲ. ಇ.ಡಿ ಜಾಮೀನು ನೀಡಿದ ನಂತರ ಸಿಬಿಐ ಬಂಧಿಸಿರುವುದು, ಬಿಜೆಪಿಯ ಆಜ್ಞೆಯ ಮೇರೆಗೆ ನಡೆದಿರುವ ಸಿಬಿಐನ ದುರುಪಯೋಗ’ ಎಂದು ಆರೋಪಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿಯ ನಿರ್ದೇಶನದ ಅನುಸಾರ ತಮ್ಮ ನಾಯಕರ ವಿರುದ್ಧ ದುರುದ್ದೇಶ ಮತ್ತು ರಾಜಕೀಯ ಪ್ರೇರಿತವಾಗಿ ನಡೆದುಕೊಳ್ಳುತ್ತಿವೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.
ಕೇಜ್ರಿವಾಲ್ ಅವರನ್ನು ಬುಧವಾರ ಬಂಧಿಸಿದ ನಂತರ ದೆಹಲಿ ನ್ಯಾಯಾಲಯವು ಅವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. ಕೇಜ್ರಿವಾಲ್ ತಾನು ನಿರಪರಾಧಿ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.