ನವದೆಹಲಿ: ‘ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿದೆ. ಜೊತೆಗೆ ಜೈಲಿನಲ್ಲಿ ಅವರಿಗೆ ಸೂಕ್ತವಾದ ವೈದ್ಯಕೀಯ ನೆರವನ್ನೂ ನೀಡಲಾಗುತ್ತಿಲ್ಲ’ ಎಂದು ಎಎಪಿ ಭಾನುವಾರ ಆರೋಪಿಸಿದೆ.
ಸಚಿವೆ ಆತಿಶಿ ಪತ್ರಿಕಾಗೋಷ್ಠಿ ನಡೆಸಿ, ‘ಕೇಜ್ರಿವಾಲ್ ಅವರಿಗೆ ಮಧುಮೇಹವಿದೆ. ರಕ್ತದಲ್ಲಿನ ಸಕ್ಕರೆ ಅಂಶವು ಅಪಾಯಕಾರಿ ಎನ್ನುವಂತೆ ಕುಸಿಯುತ್ತಿದೆ. ರಾತ್ರಿ ಮಲಗಿದಾಗ ಅವರ ರಕ್ತದಲ್ಲಿನ ಸಕ್ಕರೆ ಅಂಶವು 50 ಎಂ.ಜಿ/ಡಿ.ಎಲ್‌ಗಿಂತ ಐದು ಬಾರಿ ಕಡಿಮೆಯಾಗುತ್ತಿದೆ. ಅವರ ತೂಕ ಕೂಡ 8.5 ಕೆ.ಜಿಯಷ್ಟು ಇಳಿಕೆಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಸುಳ್ಳು ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸುವ ಕುತಂತ್ರವನ್ನು ಬಿಜೆಪಿ ಮಾಡುತ್ತಿದೆ. ಒಂದೊಮ್ಮೆ ಕೇಜ್ರಿವಾಲ್ ಅವರಿಗೆ ಪಾರ್ಶ್ವವಾಯು ಆದರೆ, ಮಿದುಳಿಗೆ ತೊಂದರೆಯಾದರೆ ಅಥವಾ ಯಾವುದೇ ರೀತಿಯ ಶಾಶ್ವತ ಊನವಾದರೆ, ಇದರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ? ಹೀಗಾದರೆ, ದೇಶದ ಜನರಷ್ಟೇ ಅಲ್ಲ... ದೇವರು ಕೂಡ ಬಿಜೆಪಿಯನ್ನು ಕ್ಷಮಿಸುವುದಿಲ್ಲ’ ಎಂದರು.
‘ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುತ್ತೀರಾ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆತಿಶಿ, ‘ವಕೀಲರು ಹಾಗೂ ವೈದ್ಯರ ಬಳಿ ಸಮಾಲೋಚನೆ ನಡೆಸುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.