ನವದೆಹಲಿ:ಬಾಲಾಕೋಟ್‌ನಲ್ಲಿ ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿಯ ಸೂತ್ರಧಾರರಲ್ಲೊಬ್ಬರಾದ ಸಮಂತ್ ಗೋಯಲ್ ಅವರನ್ನು ರಿಸರ್ಚ್ ಅನಾಲಿಸಿಸ್ ವಿಂಗ್‌ನ (ರಾ) ಮುಖ್ಯಸ್ಥರಾಗಿ ಸರ್ಕಾರ ನೇಮಕ ಮಾಡಿದೆ. ಜತೆಗೆ, ಗುಪ್ತಚರ ದಳದ (ಐಬಿ) ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಅರವಿಂದ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಅರವಿಂದ ಕುಮಾರ್ ಅವರು ಸದ್ಯ ಗುಪ್ತಚರ ದಳದ ಕಾಶ್ಮೀರ ವಿಭಾಗದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಗೋಯಲ್ ಅವರು 1984ನೇ ಬ್ಯಾಚ್‌ನ ಪಂಜಾಬ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದು ಅರವಿಂದ ಕುಮಾರ್ ಅವರು ಅದೇ ವರ್ಷದ ಬ್ಯಾಚ್‌ನ ಅಸ್ಸಾಂ–ಮೇಘಾಲಯ ಕೇಡರ್‌ನಐಪಿಎಸ್ ಅಧಿಕಾರಿಯಾಗಿದ್ದಾರೆ. ‘ರಾ’ ಮತ್ತು ‘ಐಬಿ’ ಮುಖ್ಯಸ್ಥರ ಹುದ್ದೆಗಳ ಅವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ.‘ರಾ’ ಮುಖ್ಯಸ್ಥ ಅನಿಲ್ ಕೆ ಧಸ್ಮನ ಮತ್ತು ಗುಪ್ತಚರ ದಳದ ಮುಖ್ಯಸ್ಥ ರಾಜೀವ್ ಜೈನ್ ಅವಧಿ ಆರು ತಿಂಗಳ ಹಿಂದೆಯೇ ಕೊನೆಗೊಂಡಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇವರಿಬ್ಬರ ಅವಧಿಯನ್ನು 6 ತಿಂಗಳು ವಿಸ್ತರಿಸಲಾಗಿತ್ತು.
2016ರಲ್ಲಿ ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರ ದಾಳಿಯ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿಯ ಯೋಜನೆ ರೂಪಿಸುವಲ್ಲಿಯೂ ಗೋಯಲ್ ಪ್ರಮುಖ ಪಾತ್ರವಹಿಸಿದ್ದರು. 1990ರಲ್ಲಿ ಪಂಜಾಬ್‌ನಲ್ಲಿ ಉಗ್ರವಾದ ಹತ್ತಿಕ್ಕುವಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅರವಿಂದ ಕುಮಾರ್ ಅವರು ಗುಪ್ತಚರ ದಳದಲ್ಲಿದ್ದುಕೊಂಡು ದೇಶದೊಳಗಿನ ಎಡಪಂಥೀಯ ಉಗ್ರವಾದವನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.