ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಅಭ್ಯರ್ಥಿ ಶಾಯಿನಾ ಎನ್‌ಸಿ ಅವರನ್ನು ‘ಹೊರಗಿನ ಮಾಲು’ ಎಂದಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಸಂಸದ ಅರವಿಂದ ಸಾವಂತ್ ಇಂದು (ಶನಿವಾರ) ಕ್ಷಮೆಯಾಚಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಕೆಲವು ದಿನಗಳಿಂದ ನಾನು ಶಾಯಿನಾ ಅವರನ್ನು ಅವಮಾನಿಸಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ಆದರೆ, ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಮಹಿಳೆಯ ಘನತೆಗೆ ಯಾವತ್ತೂ ಕುಂದು ತಂದಿಲ್ಲ. ಯಾವಾಗಲೂ ಅವರನ್ನು ಗೌರವಿಸಿದ್ದೇನೆ’ ಎಂದು ಹೇಳಿದ್ದಾರೆ.
‘ನನ್ನನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗುತ್ತಿದೆ. ಇದರಿಂದ ತೀವ್ರ ನಿರಾಸೆಗೊಂಡಿದ್ದೇನೆ. ಒಂದು ವೇಳೆ ನಾನು ಯಾರನ್ನಾದರೂ ನೋಯಿಸಿದ್ದರೆ, ಕ್ಷಮಿಸಿ’ ಎಂದು ವಿನಂತಿಸಿಕೊಂಡಿದ್ದಾರೆ.
ಅರವಿಂದ್ ಸಾವಂತ್ ಹೇಳಿಕೆಯಿಂದ ಉದ್ಧವ್ ಠಾಕ್ರೆಯವರ ಶಿವಸೇನಾ ಬಣ ತೀವ್ರ ಮುಜುಗರಕ್ಕೀಡಾಗಿದೆ. ಸಾವಂತ್ ಹೇಳಿಕೆ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ್ದ ಶಾಯಿನಾ, ‘ನಾನು ಮಾಲು ಅಲ್ಲ, ಮಹಿಳೆ’ ಎಂದು ತಿರುಗೇಟು ನೀಡಿದ್ದರು.
ಸಾವಂತ್ ಹೇಳಿಕೆ ಖಂಡಿಸಿ ಶಿಂದೆ ಬಣದ ಶಿವಸೇನಾದ ಮಹಿಳಾ ಘಟಕವು ನಾಗಪಾಡಾ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು, ಪೊಲೀಸರಿಗೆ ದೂರನ್ನೂ ನೀಡಿದೆ. ಇದರ ಆಧಾರದಲ್ಲಿ ಭಾರತ ನ್ಯಾಯ ಸಂಹಿತೆಯ ಸೆಕ್ಷನ್ 79 ಮತ್ತು 356 (2)ರ ಅಡಿಯಲ್ಲಿ ಪೊಲೀಸರು ಸಾವಂತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
‘ಆಕೆಯ ಸ್ಥಿತಿಯನ್ನು ನೋಡಿ. ಆಕೆ ತನ್ನ ಜೀವನ ಪೂರ್ತಿ ಬಿಜೆಪಿಯಲ್ಲಿದ್ದರು. ಈಗ ಇನ್ನೊಂದು ಪಕ್ಷಕ್ಕೆ ಹೋಗಿದ್ದಾರೆ. ಹೊರಗಿನಿಂದ ಬಂದ ‘ಮಾಲು’ ಇಲ್ಲಿ ಕೆಲಸ ಮಾಡದು. ಮೂಲ ‘ಮಾಲು’ ಮಾತ್ರ ಕೆಲಸ ಮಾಡುತ್ತದೆ... ನಮ್ಮಲ್ಲಿ ಅಂತಹ ಮಾಲು ಇದೆ’ ಎಂದು ಸಾವಂತ್ ಹೇಳಿದ್ದರು.
ಈ ಸಂದರ್ಭದಲ್ಲಿ ಜೊತೆಗಿದ್ದ ಅಭ್ಯರ್ಥಿ ಪಟೇಲ್ ನಗುತ್ತಿದ್ದರು. ಸಾವಂತ್ ಹೇಳಿಕೆಗೆ ತಿರುಗೇಟು ನೀಡಿರುವ ಶಾಯಿನಾ ‘2014 ಮತ್ತು 2019ರಲ್ಲಿ ನಾವು ಇದೇ ಅರವಿಂದ ಸಾವಂತ್ ಪರವಾಗಿ ಪ್ರಚಾರ ಮಾಡಿದ್ದೆವು. ಒಬ್ಬ ಮಹಿಳೆಯನ್ನು ‘ಮಾಲು’ ಎಂದು ಕರೆಯುವ ಅವರ ಯೋಚನಾ ಮಟ್ಟ ಯಾವ ರೀತಿ ಇದೆ ಎಂಬುದನ್ನು ನೋಡಿ. ಈ ಚುನಾವಣೆಯಲ್ಲಿ ಇಲ್ಲಿನ ಅದೇ ಮತದಾರರು ಅವರನ್ನು ಶೋಚನೀಯವಾಗಿ ಸೋಲಿಸಲಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.