ಮುಂಬೈ: ಕಳೆದ ವರ್ಷ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತುಗೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ತಮ್ಮ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಮನವಿ ಸಲ್ಲಿಸಿದ್ದಾರೆ.
ಈ ವಿಷಯದಲ್ಲಿ ಉತ್ತರಿಸುವಂತೆ ಮಾದಕ ವಸ್ತುಗಳ ನಿಯಂತ್ರಣ ಘಟಕಕ್ಕೆ (ಎನ್‌ಸಿಬಿ) ಸೂಚನೆ ನೀಡಿರುವ ನ್ಯಾಯಾಲಯವು ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿದೆ.
ಕಳೆದ ವರ್ಷ ಅಕ್ಟೋಬರ್ 3ರಂದು ಡ್ರಗ್ಸ್ ಪ್ರಕರಣದಲ್ಲಿ 24 ವರ್ಷದ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಬಂಧಿಸಿತ್ತು.
20 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದ ಆರ್ಯನ್ ಖಾನ್ ಅವರಿಗೆ ಬಾಂಬೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಸಲ್ಲಿಸಿದ್ದರು.
ಬಳಿಕ ಮೇ ತಿಂಗಳಲ್ಲಿ ಎನ್‌ಸಿಬಿ ಆರೋಪಪಟ್ಟಿ ಸಲ್ಲಿಸಿತ್ತು. ಆದರೆ ಆರ್ಯನ್ ಖಾನ್ ಹಾಗೂ ಇತರೆ ಐವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪ ಮುಕ್ತಗೊಳಿಸಿತ್ತು.
ಈಗ ಆರೋಪ ಮುಕ್ತಗೊಂಡಿರುವ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಆರ್ಯನ್ ಖಾನ್ ಗುರುವಾರ ಮನವಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.