ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲಿನಲ್ಲಿ ಅನುಭವಿಸಿದ ಮಾನಸಿಕ ಯಾತನೆಗೆ ಯಾರು ಹೊಣೆ ಎಂದು ಆಡಳಿತರೂಢ ಎನ್‌ಸಿಪಿ ಪ್ರಶ್ನಿಸಿದೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್‌ರನ್ನು ಶುಕ್ರವಾರ ಮಾದಕ ವಸ್ತುಗಳ ನಿಯಂತ್ರಣ ಘಟಕ(ಎನ್‌ಸಿಬಿ) ಆರೋಪ ಮುಕ್ತಗೊಳಿಸಿದೆ. ಇಷ್ಟು ದಿನ ಅವರು ಜೈಲಿನಲ್ಲಿ ಅನುಭವಿಸಿದ ಮಾನಸಿಕ ಯಾತನೆಗೆ ಯಾರು ಹೊಣೆ?, ಈ ಬಗ್ಗೆ ದೇಶದ ಜನತೆಗೆ ಎನ್‌ಸಿಬಿಯ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಉತ್ತರಿಸಬೇಕು. ತಪ್ಪು ಮಾಡದ ಯುವಕನ ಮೇಲೆ ಅಪವಾದ ಹೊರಿಸಿದ್ದು ಏಕೆ?, ಇದರ ಹಿಂದಿನ ಷಡ್ಯಂತ್ರವೇನು ಎಂದು ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ ಪ್ರಶ್ನಿಸಿದ್ದಾರೆ.
ಈ ಪ್ರಕರಣವು ಮಹಾ ವಿಕಾಸ ಅಘಾಡಿ ಸರ್ಕಾರವನ್ನು ಉರುಳಿಸುವ ಭಾಗವಾಗಿ ನಡೆಸಿದ ದೊಡ್ಡ ಪಿತೂರಿ ಎಂದು ಶಿವಸೇನಾ ಮತ್ತು ಎನ್‌ಸಿಪಿಯ ಮಿತ್ರ ಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಎನ್‌ಸಿಬಿ ನಕಲಿ ದಾಖಲೆ ಸೃಷ್ಟಿಸಿ ಸುಳ್ಳು ಪ್ರಕರಣ ದಾಖಲಿಸಿತ್ತು. ಬಿಜೆಪಿಯಲ್ಲಿ ಗುರುತಿಸಿಕೊಂಡವರೇ ಈ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದಾರೆ ಎಂದು ಸಚಿವ ನವಾಬ್ ಮಲ್ಲಿಕ್ ಹೇಳಿದ್ದು ಸರಿಯಾಗಿಯೇ ಇದೆ ಎಂದು ಎನ್‌ಸಿಪಿ ಮುಖ್ಯವಕ್ತಾರ ಮಹೇಶ್ ತಾಪಸೆ ಹೇಳಿದ್ದಾರೆ.
ಎನ್‌ಸಿಪಿ ಮುಖ್ಯ ವಕ್ತಾರರಾಗಿದ್ದ ನವಾಬ್ ಮಲ್ಲಿಕ್ ಅವರು ಸಮೀರ್ ವಾಂಖೆಡೆ ಸೇರಿದಂತೆ ಎನ್‌ಸಿಬಿ ಅಧಿಕಾರಿಗಳ ವಿರುದ್ಧ ನಿರಂತರವಾಗಿ ಗಂಭೀರ ಆರೋಪಗಳನ್ನು ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.