ಚಂಡೀಗಡ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಚಂಡೀಗಡಕ್ಕೆ ಭೇಟಿ ನೀಡುತ್ತಿರುವ ನಡುವೆ ಪಂಜಾಬ್ ಕಾಂಗ್ರೆಸ್‌ನ ನಾಲ್ವರು ಹಿರಿಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಬಗ್ಗೆ ಊಹಾಪೋಹಾಗಳು ಹರಿದಾಡುತ್ತಿವೆ.
ಮಾಜಿ ಸಚಿವರಾದ ರಾಜ್ ಕುಮಾರ್ ವೆರ್ಕ, ಬಲಬೀರ್ ಸಿಂಗ್ ಸಿಧು, ಸುಂದರ್ ಶ್ಯಾಮ್ ಅರೋರಾ ಮತ್ತು ಗುರುಪ್ರೀತ್ ಸಿಂಗ್ ಕಂಗರ್ ಬಿಜೆಪಿ ಸೇರ್ಪಡೆಯಾಗುವ ಕುರಿತು ವರದಿಯಾಗಿದೆ.
ಬಿಜೆಪಿ ಮುಖಂಡ ಸುನಿಲ್ ಜಾಖಡ್ಅವರ ಜೊತೆಗೆ ಕಾಂಗ್ರೆಸ್‌ನ ನಾಲ್ವರು ನಾಯಕರು ಇರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಬಿಜೆಪಿಗೆ ಸೇರುವುದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಪುಷ್ಠಿ ದೊರಕಿದೆ. ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಕಾಣಿಸಿಕೊಂಡಿದ್ದಾರೆ.
ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಮೊಹಾಲಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಲಬೀರ್ ಸಿಂಗ್, ಆರೋಗ್ಯ ಸಚಿವರಾಗಿದ್ದರು. ಮೂರು ಬಾರಿಯ ಶಾಸಕ ಗುರುಪ್ರೀತ್, ಕಂದಾಯ ಸಚಿವರಾಗಿದ್ದರು.
ದಲಿತ ನಾಯಕ ವೆರ್ಕ, ಸಾಮಾಜಿಕ ನ್ಯಾಯ, ಸಬಲೀಕರಣ ಹಾಗೂ ಅಲ್ಪಸಂಖ್ಯಾತ ಹುದ್ದೆ ನಿರ್ವಹಿಸಿದ್ದರು. ಶ್ಯಾಮ್ ಅರೋರಾ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವರಾಗಿದ್ದರು.
ಈ ಎಲ್ಲ ಮುಖಂಡರುಪ್ರಸಕ್ತ ಸಾಲಿನಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
ಇದರ ಹೊರತಾಗಿ ಕಾಂಗ್ರೆಸ್‌ನ ಮಾಜಿ ಶಾಸಕ ಬರ್ನಲ ಕೆವಲ್ ದಿಲ್ಲಾನ್ ಮತ್ತು ಅಕಾಲಿ ದಳದ ಮಾಜಿ ಶಾಸಕ ಸರೂಪ್ ಚಾಂದ್ ಸಿಂಗ್ಲಾ ಸಹ ಬಿಜೆಪಿ ಸೇರುವ ಬಗ್ಗೆ ವರದಿಯಾಗಿದೆ.
ಚಂಡೀಗಡಕ್ಕೆ ಆಗಮಿಸಲಿರುವ ಅಮಿತ್ ಶಾ, ರಾಜ್ಯದ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.