ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು–ಕಾಶ್ಮೀರ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಒಮರ್ ಅಬ್ದುಲ್ಲಾ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನಡುವಿನ ವಾಗ್ಯುದ್ಧವೂ ಜೋರಾಗುತ್ತಿದೆ.
ಒಂದು ಕಾಲದಲ್ಲಿ ಗುಪ್ಕರ್ ಮೈತ್ರಿಕೂಟದ ಅಂಗಪಕ್ಷಗಳಾಗಿದ್ದ ಎನ್‌ಸಿ ಹಾಗೂ ಪಿಡಿಪಿ, ಈಗ ಪರಸ್ಪರರ ವಿರುದ್ಧ ಬಿರು ಮಾತಿನ ಪ್ರಹಾರ ಆರಂಭಿಸಿವೆ. ಜಮ್ಮು–ಕಾಶ್ಮೀರದ ಪ್ರಸಕ್ತ ಸನ್ನಿವೇಶಕ್ಕೆ ಪಿಡಿಪಿ ವಿರುದ್ಧ ಎನ್‌ಸಿ ದೂರುತ್ತಿದ್ದರೆ, ಎನ್‌ಸಿ ಕಾರಣ ಎಂದು ಪಿಡಿಪಿ ವಾಗ್ದಾಳಿ ನಡೆಸುತ್ತಿದೆ.
ಅಬ್ದುಲ್ಲಾಗಳು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದ ಮೆಹಬೂಬಾ ಮುಫ್ತಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಒಮರ್, ‘ನಮ್ಮ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಮಾಡುತ್ತಿರುವವರು ತಮ್ಮ ಸಂಬಂಧಿಕರನ್ನೇ ಚುನಾವಣಾ ಕಣಕ್ಕಿಳಿಸಿದ್ಧಾರೆ’ ಎಂದು ಹರಿಹಾಯ್ದಿದ್ದಾರೆ.
‘ಅವರು ನಿಜವಾಗಿಯೂ ಕುಟುಂಬ ರಾಜಕಾರಣದ ವಿರುದ್ಧ ಇದ್ದಲ್ಲಿ, ತಮ್ಮ ಕುಟುಂಬದವರ ಬದಲಾಗಿ ಬೇರೆಯವರಿಗೆ ಅವಕಾಶ ನೀಡಬೇಕಿತ್ತು’ ಎಂದು ಮೆಹಬೂಬಾ ವಿರುದ್ಧ ಪರೋಕ್ಷ ಟೀಕೆ ಮಾಡಿದ್ದಾರೆ.
ಮೆಹಬೂಬಾ ಅವರ ಪುತ್ರಿ ಇಲ್ತಿಜಾ ಅವರು ಪಿಡಿಪಿ ಅಭ್ಯರ್ಥಿಯಾಗಿದ್ದಾರೆ.
ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಮೆಹಬೂಬಾ, ‘ಪ್ರತಿ ಬಾರಿಯೂ ಚುನಾವಣೆಗಳ ಸಮಯದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ತನ್ನ ನಿಲುವುಗಳನ್ನು ಬದಲಿಸುತ್ತಾ ಬಂದಿದೆ. ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಕೆಲವೊಮ್ಮೆ ಚುನಾವಣೆಗಳನ್ನು ‘ಹರಾಮ್’ ಎಂದರೆ, ಕೆಲವು ಬಾರಿ ‘ಹಲಾಲ್’ ಎಂಬುದಾಗಿ ಕರೆಯಲಾಗುತ್ತಿತ್ತು’ ಎಂದು ಒಮರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.