ನವದೆಹಲಿ: ಭಾರತದಲ್ಲಿ ಹಬ್ಬಗಳ ಋತು ಆರಂಭವಾಗಲಿದ್ದು, ಕೋವಿಡ್–19 ಮಾರ್ಗಸೂಚಿಗಳ ಕುರಿತು ಡಿಜಿಟಿಲ್ ಸಮುದಾಯ ಆಧಾರಿತ ವೇದಿಕೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ‘ಸಾರ್ವಜನಿಕ ಸ್ಥಳಗಳಲ್ಲಿ ಶೇ 13ರಷ್ಟು ಜನರು ಮಾತ್ರ ಮಾಸ್ಕ್ ಧರಿಸುವುದು ಹಾಗೂ ಶೇ 6ರಷ್ಟು ಜನರು ಮಾತ್ರ ದೈಹಿಕ ಅಂತರ ಪಾಲಿಸುವುದು ಕಂಡುಬಂದಿದೆ’ ಎಂದು ತಿಳಿಸಿದ್ದಾರೆ.
‘ಲೋಕಲ್ ಸರ್ಕಲ್ಸ್’ ನಡೆಸಿರುವ ಸಮೀಕ್ಷೆಯಲ್ಲಿ ದೇಶದ 366 ಜಿಲ್ಲೆಗಳ ಒಟ್ಟು 65 ಸಾವಿರ ನಾಗರಿಕರಿಂದ ಪ್ರತಿಕ್ರಿಯೆ ಸಂಗ್ರಹಿಸಲಾಗಿದೆ.
ನಗರ, ಜಿಲ್ಲೆಗಳಲ್ಲಿ ಬಸ್ಸು, ರೈಲು, ವಿಮಾನ ಪ್ರಯಾಣದ ವೇಳೆ ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳನ್ನು ಹೇಗೆ ಪಾಲಿಸುತ್ತಿದ್ದಾರೆ ಎನ್ನುವ ಕುರಿತು ಸಮೀಕ್ಷೆಯಲ್ಲಿ ಅಧ್ಯಯನ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಶೇ 60ರಷ್ಟು ಪ್ರಮಾಣದಲ್ಲಿ ಪುರುಷರು ಹಾಗೂ ಶೇ 36ರಷ್ಟು ಪ್ರಮಾಣದಲ್ಲಿ ಮಹಿಳೆಯರು ಭಾಗವಹಿಸಿದ್ದರು.
ಇದೇ ವರ್ಷ ಜೂನ್‌ನಲ್ಲೂ ‘ಲೋಕಲ್ ಸರ್ಕಲ್ಸ್’ ಸಮೀಕ್ಷೆ ಕೈಗೊಂಡಿತ್ತು. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡಿದ್ದ ಮಾಹಿತಿಯಲ್ಲಿ ಶೇ 29ರಷ್ಟು ಮಂದಿ ಮಾಸ್ಕ್ ಧರಿಸುವುದು ಹಾಗೂ ಶೇ 11ರಷ್ಟು ಜನರು ದೈಹಿಕ ಅಂತರ ಪಾಲಿಸುವುದು ಕಂಡುಬಂದಿತ್ತು ಎಂದು ಹೇಳಿದ್ದರು.
‘ಈ ಬಾರಿ ನಡೆಸಿರುವ ಸಮೀಕ್ಷೆಯಲ್ಲಿ ಮಾಸ್ಕ್ ಧರಿಸುವಿಕೆ ಶೇ 29ರಿಂದ 13ಕ್ಕೆ ಹಾಗೂ ದೈಹಿಕ ಅಂತರ ಪಾಲಿಸುವಿಕೆಯು ಶೇ 11ರಿಂದ 6ಕ್ಕೆ ಇಳಿದಿದೆ. ಬಹುತೇಕರು ಕೋವಿಡ್–19 ಹೋಗಿದೆ ಎಂದೇ ಭಾವಿಸಿದ್ದಾರೆ. ಆದರೆ, ಸಾಲು ಸಾಲು ಹಬ್ಬಗಳು ಆರಂಭವಾಗುತ್ತಿದ್ದು, ಶಾಪಿಂಗ್ ಮಾಲ್‌ಗಳು, ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸುತ್ತಿರುವುದನ್ನು ನೋಡಿದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ‘ಲೋಕಲ್ ಸರ್ಕಲ್ಸ್’ನ ಸಂಸ್ಥಾಪಕ ಸಚಿನ್ ಥಾಪರಿಯಾ ಎಚ್ಚರಿಕೆ ನೀಡಿದ್ದಾರೆ.
ಈ ವರ್ಷದ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ‘ಲೋಕಲ್ ಸರ್ಕಲ್ಸ್’ನಲ್ಲಿ ವರದಿಯಾದ ಪ್ರಮಾಣಕ್ಕಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.