ADVERTISEMENT

ಶಸ್ತ್ರಾಸ್ತ್ರ ಆಮದು: ಭಾರತಕ್ಕೆ 2ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 22:00 IST
Last Updated 9 ಮಾರ್ಚ್ 2020, 22:00 IST
   

ನವದೆಹಲಿ: ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವು ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಮೊದಲ ಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ.

‘ಭಾರತವು ಕಳೆದ 5ವರ್ಷಗಳಿಂದ ಈ ಸ್ಥಾನದಲ್ಲಿ ಇದೆ. ಪಾಕಿಸ್ತಾನವು 11ನೇ ಸ್ಥಾನದಲ್ಲಿದೆ’ ಎಂದು ಸ್ಟಾಕ್‌ಹೋಮ್‌ ಇಂಟರ್‌
ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ನ ವರದಿ ಹೇಳಿದೆ.

ಜಾಗತಿಕ ಶಸ್ತ್ರಾಸ್ತ್ರ ವ್ಯವಹಾರದ ಮೇಲೆ ಈ ಸಂಸ್ಥೆಯು ನಿಗಾ ಇರಿಸುತ್ತಿದೆ.ಶಸ್ತ್ರಾಸ್ತ್ರ ಆಮದಿನಲ್ಲಿ ಸುಮಾರು ಒಂದು ದಶಕ ಭಾರತವು ಮೊದಲ ಸ್ಥಾನದಲ್ಲಿಯೇ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ದೇಶೀಯವಾಗಿ ಯುದ್ಧೋಪಕರಣಗಳ ತಯಾರಿಕೆಯಲ್ಲಿ ಹೆಚ್ಚಳವಾಗಿದೆ. ಹಾಗಾಗಿ, ಭಾರತವು ಎರಡನೇ ಸ್ಥಾನಕ್ಕೆ ಇಳಿದಿದೆ.

ADVERTISEMENT

2015–19ರ ಅವಧಿಯಲ್ಲಿ ಒಟ್ಟು ಶಸ್ತ್ರಾಸ್ತ್ರ ಅಗತ್ಯದ ಶೇ 9.2ರಷ್ಟನ್ನು ಭಾರತ ಆಮದು ಮಾಡಿಕೊಂಡಿದೆ. 2010–14ರ ಅವಧಿಯಲ್ಲಿ ಇದು ಶೇ 14ರಷ್ಟಿತ್ತು.ಸೌದಿ ಅರೇಬಿಯಾವು ಯುದ್ಧ ಸಾಮಗ್ರಿ ಆಮದು ಮಾಡಿ ಕೊಳ್ಳುವ ಪ್ರಮಾಣ ಹೆಚ್ಚುತ್ತಲೇ
ಇದೆ. 2015–19ರ ಅವಧಿಯಲ್ಲಿ ಈ ದೇಶವು ತನ್ನ ಶಸ್ತ್ರಾಸ್ತ್ರ ಬೇಡಿಕೆಯ ಶೇ 12ರಷ್ಟನ್ನು ಬೇರೆ ದೇಶಗಳಿಂದ ಖರೀದಿಸಿದೆ. 2010–14ರ ಅವಧಿಯಲ್ಲಿ ಇದು ಶೇ 5.6ರಷ್ಟಕ್ಕೆ ಸೀಮಿತವಾಗಿತ್ತು.

ಪಾಕ್‌ ಇಳಿಕೆ
ಪಾಕಿಸ್ತಾನದ ಆಮದು ಪ್ರಮಾಣವು ಶೇ 39ರಷ್ಟು ಕಡಿಮೆಯಾಗಿದೆ.

ಪಾಕಿಸ್ತಾನಕ್ಕೆ ಅಮೆರಿಕವು ಸೇನಾ ನೆರವು ನಿಲ್ಲಿಸಿರುವುದೇ ಈ ಕುಸಿತಕ್ಕೆ ಕಾರಣ. 2010–14ರ ಅವಧಿಯಲ್ಲಿ ಒಟ್ಟು ಅಗತ್ಯದ ಶೇ 30ರಷ್ಟು ಶಸ್ತ್ರಗಳನ್ನು ಅಮೆರಿಕದಿಂದ ಪಡೆದುಕೊಂಡಿತ್ತು. 2015–19ರಲ್ಲಿ ಇದು ಶೇ 4.1ರಷ್ಟಕ್ಕೆ ಇಳಿದಿದೆ.

2015–19ರ ಅವಧಿಯಲ್ಲಿ ಪಾಕಿಸ್ತಾನವು ಯುರೋಪ್‌ನಿಂದ ಆಮದನ್ನು ಮುಂದುವರಿಸಿದೆ. ಟರ್ಕಿ ಜತೆಗಿನ ಆಯುಧ ವ್ಯಾಪಾರವನ್ನು ಹೆಚ್ಚಿಸಿಕೊಂಡಿದೆ. 2018ರಲ್ಲಿ ಅಲ್ಲಿಂದ 30 ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಸಿದೆ.

ರಷ್ಯಾ ಪಾಲು ಕುಸಿತ

ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸುವ ಅತಿ ದೊಡ್ಡ ದೇಶವಾಗಿ ರಷ್ಯಾ ಮುಂದುವರಿದಿದೆ. ಆದರೆ, ಅಲ್ಲಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣದಲ್ಲಿ ಇಳಿಕೆಯಾಗಿದೆ. 2015–19ರ ಅವಧಿಯಲ್ಲಿ ಭಾರತದ ಅಗತ್ಯದ ಶೇ 25ರಷ್ಟು ಶಸ್ತ್ರಾಸ್ತ್ರವನ್ನು ರಷ್ಯಾದಿಂದ ಪಡೆಯಲಾಗಿದೆ. 2010–14 ಅವಧಿಗೆ ಹೋಲಿಸಿದರೆ ಶಸ್ತ್ರಾಸ್ತ್ರ ಆಮದು ಪ್ರಮಾಣವು
ಶೇ 47ರಷ್ಟು ಇಳಿಕೆಯಾಗಿದೆ.

2010–14ರಲ್ಲಿ ಭಾರತಕ್ಕೆ ಯುದ್ಧ ಸಾಮಗ್ರಿ ಪೂರೈಸುವ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿ ಅಮೆರಿಕ ಹೊಮ್ಮಿತ್ತು. ಆದರೆ, 2015–19ರಲ್ಲಿ ಬೇರೆ ಪೂರೈಕೆದಾರರತ್ತ ಭಾರತ ಹೊರಳಿದೆ. ಇಸ್ರೇಲ್‌ ಮತ್ತು ಫ್ರಾನ್ಸ್‌ನಿಂದ ಆಮದು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹಾಗಾಗಿ, 2015–19ರಲ್ಲಿ ಅಮೆರಿಕದಿಂದ ಯುದ್ಧ ಸಾಮಗ್ರಿ ಆಮದು ಪ್ರಮಾಣ ಶೇ 51ರಷ್ಟು ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.