ADVERTISEMENT

ಎಸ್‌ಸಿಒ ಸಭೆ: ಭಾರತಕ್ಕೆ ಆಗಮಿಸಿದ ಚೀನಾ, ರಷ್ಯಾ ವಿದೇಶಾಂಗ ಸಚಿವರು 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮೇ 2023, 5:49 IST
Last Updated 4 ಮೇ 2023, 5:49 IST
ವಿದೇಶಾಂಗ ಸಚಿವ ಎಸ್‌. ಜೈಶಂಕರ್‌
ವಿದೇಶಾಂಗ ಸಚಿವ ಎಸ್‌. ಜೈಶಂಕರ್‌   

ಪಣಜಿ: ಶಾಂಘೈ ಸಹಕಾರ ಸಂಘಟನೆಯ(ಎಸ್‌ಸಿಒ) ಉನ್ನತ ಮಟ್ಟದ ಹಾಗೂ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಚೀನಾ ಮತ್ತು ರಷ್ಯಾ ಸಚಿವರು ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ.

ಗೋವಾದ ಖಾಸಗಿ ಹೋಟೆಲ್‌ನಲ್ಲಿ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆ ಇಂದು ಮತ್ತು ನಾಳೆ ನಡೆಯಲಿದೆ.

ಶಾಂಘೈ ಸಹಕಾರ ಸಂಘಟನೆಯ 8 ರಾಷ್ಟ್ರಗಳ ಒಕ್ಕೂಟವಾಗಿದ್ದು, ಈ ಬಾರಿ ಭಾರತಕ್ಕೆ ಅಧ್ಯಕ್ಷತೆ ಲಭಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. 

ADVERTISEMENT

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹಾಗೂ ಚೀನಾದ ವಿದೇಶಾಂಗ ಮಂತ್ರಿ ಕ್ವಿನ್‌ ಗ್ಯಾಂಗ್‌ ಈಗಾಗೇ ಭಾರತಕ್ಕೆ ಆಗಮಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ ಕೂಡ ಸಭೆಗೆ ಬರಲಿದ್ದಾರೆ. ಜೊತೆಗೆ ವೀಕ್ಷಕ ದೇಶಗಳಾಗಿ ಬೆಲಾರಸ್‌ ಹಾಗೂ ಇರಾನ್‌ನ ಪ್ರತಿನಿಧಿಗಳು ಭಾಗವಹಿಸುತ್ತಾರೆ.

ಪ್ರಾದೇಶಿಕ ಶಾಂತಿ ಮತ್ತು ಭದ್ರತೆ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

ಭಾರತವು ಕಳೆದ ವಾರ ಎಸ್‌ಸಿಒ ರಕ್ಷಣಾ ಸಚಿವರ ಮಟ್ಟದ ಸಭೆಯನ್ನು ಆಯೋಜಿಸಿತ್ತು. ಭಾರತ, ರಷ್ಯಾ, ಚೀನಾ ಮತ್ತು ಶಾಂಘೈ ಸಹಕಾರ ಸಂಘಟನೆಯ ಇತರ ಸದಸ್ಯ ರಾಷ್ಟ್ರಗಳು ಪ್ರಾದೇಶಿಕ ಭದ್ರತಾ ಸವಾಲುಗಳು ಮತ್ತು ಸಂಬಂಧಿತ ವಿಷಯಗಳ ಕುರಿತು ಚರ್ಚಿಸಿದ್ದವು.

ಭಾರತ ಸೇರಿದಂತೆ ಕಜಕಸ್ತಾನ, ಚೀನಾ, ಕಿರ್ಗಿಸ್ತಾನ, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ ಹಾಗೂ ಉಜ್ಬೇಕಿಸ್ತಾನ ಎಸ್‌ಸಿಒ ಸದಸ್ಯ ರಾಷ್ಟ್ರಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.