ADVERTISEMENT

ಹಿಜ್ಬುಲ್ಲಾ ಗುರಿಯಾಗಿಸಿ ದಾಳಿ; ಗಾಂಧೀಜಿ ಹೇಳಿಕೆ ಉಲ್ಲೇಖಿಸಿದ ಲೆಬನಾನ್ ರಾಯಭಾರಿ

ಪಿಟಿಐ
Published 9 ಅಕ್ಟೋಬರ್ 2024, 3:12 IST
Last Updated 9 ಅಕ್ಟೋಬರ್ 2024, 3:12 IST
<div class="paragraphs"><p>ಲೆಬನಾನಿನ ಬೈರೂತ್‌ ನಗರದಲ್ಲಿ ಕಾಣಿಸಿಕೊಂಡ ದಟ್ಟವಾದ ಹೊಗೆ</p></div>

ಲೆಬನಾನಿನ ಬೈರೂತ್‌ ನಗರದಲ್ಲಿ ಕಾಣಿಸಿಕೊಂಡ ದಟ್ಟವಾದ ಹೊಗೆ

   

(ರಾಯಿಟರ್ಸ್ ಚಿತ್ರ)

ನವದೆಹಲಿ: ಮಹಾತ್ಮ ಗಾಂಧೀಜಿ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಭಾರತದಲ್ಲಿನ ಲೆಬನಾನ್ ರಾಯಭಾರಿ ರಾಬಿ ನಾರ್ಶ್, 'ನೀವು ಕ್ರಾಂತಿವಾದಿಯನ್ನು ಕೊಲ್ಲಬಹುದು, ಆದರೆ ಕ್ರಾಂತಿಯನ್ನಲ್ಲ' ಎಂದು ಇಸ್ರೇಲ್‌ಗೆ ತಿರುಗೇಟು ನೀಡಿದ್ದಾರೆ.

ADVERTISEMENT

ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಉತ್ತರಾಧಿಕಾರಿಯನ್ನು ಕೊಲೆ ಮಾಡಲಾಗಿದೆ ಎಂಬ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿಕೆಗೆ ಪ್ರತಿಯಾಗಿ ಈ ರೀತಿಯಾಗಿ ನುಡಿದಿದ್ದಾರೆ.

'ನಾನು ಮಹಾತ್ಮ ಗಾಂಧೀಜಿ ಅವರ ಹೇಳಿಕೆಯನ್ನು ನೆನಪಿಸಲು ಬಯಸುತ್ತೇನೆ. ನೀವು ಕ್ರಾಂತಿವಾದಿಯನ್ನು ಕೊಲ್ಲಬಹುದು. ಆದರೆ ಕ್ರಾಂತಿಯನ್ನಲ್ಲ. ನೀವು ಹಿಜ್ಬುಲ್ಲಾ ನಾಯಕರನ್ನು ನಿರ್ಮೂಲನೆ ಮಾಡಬಹುದು. ಆದೆರೆ ಹಿಜ್ಬುಲ್ಲಾವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಹಿಜ್ಬುಲ್ಲಾ ಅಲ್ಲಿ ನೆಲೆನಿಂತಿರುವ ಜನರಾಗಿದ್ದಾರೆ. ಹಿಜ್ಬುಲ್ಲಾ ಜನರಿಂದ ಬೆಂಬಲಿತ ಕಾನೂನುಬದ್ಧ ರಾಜಕೀಯ ಪಕ್ಷವಾಗಿದೆ. ಪ್ಯಾರಾಚೂಟ್‌ನಲ್ಲಿ ಬಂದ ಕಾಲ್ಪನಿಕ ರಚನೆಯಲ್ಲ' ಎಂದು ಪಿಟಿಐಗೆ ನೀಡಿದ ವಿಡಿಯೊ ಸಂದರ್ಶನದಲ್ಲಿ ತಿಳಿಸಿದ್ದಾರೆ.

'ಇಸ್ರೇಲ್‌ನಿಂದ ಹಿಜ್ಬುಲ್ಲಾವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಅಲ್ಲದೆ ಇಸ್ರೇಲ್‌ನ ಕ್ರೂರತೆಯ ವಿರುದ್ಧ ಹಿಜ್ಬುಲ್ಲಾ ಯಶಸ್ಸು ಗಳಿಸಲಿದೆ' ಎಂದು ಅವರು ಹೇಳಿದ್ದಾರೆ.

1985ರಲ್ಲಿ ಲೆಬನಾನಿನಲ್ಲಿ ಇಸ್ರೇಲ್ ಆಕ್ರಮಣದ ವಿರುದ್ಧ ಹಿಜ್ಬುಲ್ಲಾ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು.

'ಲೆಬನಾನ್‌ನಲ್ಲಿ ಸ್ಥಾಪಿತ ರಾಜಕೀಯ ವ್ಯವಸ್ಥೆಯಡಿಯಲ್ಲಿ ಹಿಜ್ಬುಲ್ಲಾ ಕಾರ್ಯನಿರ್ವಹಿಸುತ್ತದೆ. ಅದೊಂದು ರಾಜಕೀಯ ಪಕ್ಷವಾಗಿದ್ದು, ಕ್ಯಾಬಿನೆಟ್ ಮತ್ತು ಸಂಸತ್ತಿನಲ್ಲೂ ಪ್ರತಿನಿಧಿಸುತ್ತದೆ. ಸಶಸ್ತ್ರ ವಿಭಾಗವನ್ನು ಹಿಜ್ಬುಲ್ಲಾ ಹೊಂದಿದೆ' ಎಂದು ಅವರು ತಿಳಿಸಿದ್ದಾರೆ.

'ಇಸ್ರೇಲ್ ನಡೆಸಿದ ದಾಳಿಯಲ್ಲಿ ಲೆಬನಾನಿನಲ್ಲಿ 2,100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, 11 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 2.2 ಮಿಲಿಯನ್‌ಗೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ. ಪರಿಣಾಮ ಭೀಕರ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತದಿಂದ ಔಷಧಗಳನ್ನು ಒಳಗೊಂಡಂತೆ ಲೆಬನಾನಿಗೆ ವೈದ್ಯಕೀಯ ನೆರವನ್ನು ರವಾನಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿರ್ಣಯಗಳನ್ನು ಪಾಲಿಸುವಂತೆ ಇಸ್ರೇಲ್ ಮೇಲೆ ಹೆಚ್ಚಿನ ಒತ್ತಡ ಹೇರುವಂತೆ ಭಾರತ ಸೇರಿದಂತೆ ಜಾಗತಿಕ ರಾಷ್ಟ್ರಗಳಿಗೆ ರಾಬಿ ನಾರ್ಶ್ ವಿನಂತಿಸಿದ್ದಾರೆ.

'ನೆತನ್ಯಾಹು ತಮ್ಮ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ವಿನಾಶದ ಅಮಲಿನಲ್ಲಿದ್ದಾರೆ. ಯಾರಾದರೂ ಅವರನ್ನು ತಡೆಯಬೇಕು' ಎಂದು ಹೇಳಿದ್ದಾರೆ.

'ಗಾಜಾದಂತಹ ವಿನಾಶಕಾರಿ ಸ್ಥಿತಿ ಎದುರಾಗುವ ಮುನ್ನ ನಿಮಗೆ ಲೆಬನಾನ್ ಅನ್ನು ಉಳಿಸುವ ಅವಕಾಶವಿದೆ. ಯುದ್ಧವನ್ನು ಕೊನೆಗೊಳಿಸಲು ನಿಮ್ಮ ದೇಶವನ್ನು ಹಿಜ್ಬುಲ್ಲಾದಿಂದ ಮುಕ್ತಗೊಳಿಸಿ ಎಂದು ಲೆಬನಾನಿನ ಜನರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರೆ ನೀಡಿದ್ದರು.

ಅಲ್ಲದೆ 'ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿದಂತೆ ಸಾವಿರಾರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ನಸ್ರಲ್ಲಾನ ಉತ್ತರಾಧಿಕಾರಿ, ಆತನ ಉತ್ತರಾಧಿಕಾರಿಯನ್ನು ಹತ್ಯೆ ಮಾಡಲಾಗಿದೆ' ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.