ಮುಂಬೈ: ಮುಂಬೈನಲ್ಲಿ ತಾಪಮಾನ ಹೆಚ್ಚಾಗುತ್ತಿದ್ದಂತೆ ಹವಾ ನಿಯಂತ್ರಿತ (ಎ.ಸಿ) ಸ್ಥಳೀಯ ರೈಲುಗಳ ಟಿಕೆಟ್ ಮಾರಾಟದಲ್ಲೂ ಭಾರಿ ಪ್ರಮಾಣದ ಏರಿಕೆಯಾಗಿದೆ.
ಏಪ್ರಿಲ್ 1ರಂದು ಪಶ್ಚಿಮ ವಿಭಾಗೀಯ ರೈಲ್ವೆಯು (ಡಬ್ಲ್ಯುಆರ್) ಎ.ಸಿ ರೈಲುಗಳಲ್ಲಿ ಪ್ರಯಾಣಿಸಲು 3,561 ಋತುವಿನ ಪಾಸ್‌ಗಳನ್ನು ಮತ್ತು 23,623 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಈ ವರ್ಷ ಫೆಬ್ರುವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿಯ ದಿನದ ಸರಾಸರಿ ಟಿಕೆಟ್ ಮಾರಾಟಕ್ಕೆ ಹೋಲಿಸಿದರೆ ಇದು ಗುರುತರವಾದ ಏರಿಕೆ ಎಂದು ರೈಲ್ವೆ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.
ಫೆಬ್ರುವರಿಯಲ್ಲಿ ಸರಾಸರಿ ಒಂದು ದಿನಕ್ಕೆ 1,452 ಋತುವಿನ ಪಾಸ್‌ಗಳು ಮತ್ತು 17,922 ಪ್ರಯಾಣಿಕ ಟಿಕೆಟ್‌ಗಳನ್ನು ಎ.ಸಿ ರೈಲುಗಳಲ್ಲಿ ಪ್ರಯಾಣಿಸಲು ಮಾರಾಟ ಮಾಡಲಾಗಿದೆ. ಮಾರ್ಚ್‌ನಲ್ಲಿ ಟಿಕೆಟ್ ಕೊಳ್ಳುವ ದಿನದ ಸರಾಸರಿಯಲ್ಲಿ ಏರಿಕೆಯಾಗಿದ್ದು, 1,452 ಋತುವಿನ ಪಾಸ್‌ಗಳು ಮತ್ತು 17,981 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಎ.ಸಿ ರೈಲುಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಆದ್ಯತೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಎಂಟು ಎ.ಸಿ ರೈಲುಗಳು ಮುಂಬೈ ಉಪನಗರಗಳಲ್ಲಿ ಪ್ರತಿನಿತ್ಯ ಸಂಚರಿಸುತ್ತಿವೆ. ಮುಂಬೈನಲ್ಲಿ ಸೋಮವಾರ ಗರಿಷ್ಠ ತಾಪಮಾನವು 34.2 ಡಿಗ್ರಿ ಸೆಲ್ಸಿಯಸ್ ಇತ್ತು ಎಂದು ಪಶ್ಚಿಮ ವಿಭಾಗೀಯ ರೈಲ್ವೆ ವಕ್ತಾರರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.