ADVERTISEMENT

ಕಾನೂನು ಕ್ರಮಕ್ಕೆ ಬಿಆರ್‌ಎಸ್‌ ನಿರ್ಧಾರ

ತೆಲಂಗಾಣ: ಮುಂದುವರೆದ ಪಕ್ಷಾಂತರ, ಕಾಂಗ್ರೆಸ್‌ ಸೇರಿದ ಸಂಜಯ್ ಅಚ್ಚರಿಯ ನಡೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 20:01 IST
Last Updated 24 ಜೂನ್ 2024, 20:01 IST
ಬಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್
ಬಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್   

ಹೈದರಾಬಾದ್‌: ತೆಲಂಗಾಣದಲ್ಲಿ ಬಿಆರ್‌ಎಸ್ ತ್ಯಜಿಸಿ ಕಾಂಗ್ರೆಸ್ ಸೇರುವ ಶಾಸಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಭಾನುವಾರ ಸಂಜೆ ಜಗಿತ್ಯಾಲ ಕ್ಷೇತ್ರದ ಬಿಆರ್‌ಎಸ್ ಶಾಸಕ ಡಾ.ಎಂ.ಸಂಜಯ್ ಕುಮಾರ್ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಬಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅವರ ಕುಟುಂಬಕ್ಕೆ ಅತ್ಯಾಪ್ತರಾಗಿದ್ದ ಸಂಜಯ್ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿರುವುದು ರಾಜ್ಯದ ರಾಜಕೀಯ ವಲಯದಲ್ಲಿ ಭಾರಿ ಅಚ್ಚರಿಗೆ ಕಾರಣವಾಗಿದೆ. 

ವಿಧಾನಸಭಾ ಚುನಾವಣೆಯಲ್ಲಿ ಸೋತು ಅಧಿಕಾರದಿಂದ ಕೆಳಗಿಳಿದ ನಂತರ ಬಿಆರ್‌ಎಸ್ ಶಾಸಕರು ಪಕ್ಷ ತ್ಯಜಿಸುತ್ತಿದ್ದು, ಈ ಪೈಕಿ ಸಂಜಯ್ ಕುಮಾರ್ ಅವರು ಐದನೆಯವರಾಗಿದ್ದಾರೆ. ಈ ಹಿಂದೆ ಇದೇ ರೀತಿ ದಾನಂ ನಾಗೇಂದರ್, ತಲ್ಲಂ ವೆಂಕಟರಾವ್, ಕಡಿಯಂ ಶ್ರೀಹರಿ ಮತ್ತು ಪೋಚಾರಂ ಶ್ರೀನಿವಾಸ ರೆಡ್ಡಿ ಬಿಆರ್‌ಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದರು.

ADVERTISEMENT

ಇನ್ನೂ ಕನಿಷ್ಠ 15 ಮಂದಿ ಬಿಆರ್‌ಎಸ್ ಶಾಸಕರು ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದು, ಜುಲೈ 15ರ ನಂತರ ನಡೆಯಲಿರುವ ಬಜೆಟ್ ಅಧಿವೇಶನಕ್ಕೆ ಮುನ್ನ ಪಕ್ಷ ತ್ಯಜಿಸಲು ಸಿದ್ಧರಾಗಿದ್ದಾರೆ. ಆದರೆ, ಅವರನ್ನು ಬಿಆರ್‌ಎಸ್ ಮುಖಂಡರು ತಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಭಾನುವಾರ ಸಂಜೆ ಬಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇರುವ ಕರೀಂನಗರದ ಶಾಸಕ ಮತ್ತು ಮಾಜಿ ಸಚಿವ ಗಂಗುಲ ಕಮಲಾಕರ್ ಜತೆ ಮಾತುಕತೆ ನಡೆಸಿದ್ದಾರೆ. 

ಇದೇ ವೇಳೆ, ಪಕ್ಷಾಂತರಿಗಳನ್ನು ಅನರ್ಹಗೊಳಿಸಲು ಬಿಆರ್‌ಎಸ್ ಕಾನೂನು ದಾರಿ ಹಿಡಿಯುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಬಿಆರ್‌ಎಸ್ ತ್ಯಜಿಸಿ ತಮ್ಮ ಪಕ್ಷ ಸೇರಿದ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮುಂದಿರುವ ದಾರಿ ಎಂದರೆ ಬಿಆರ್‌ಎಸ್ ಅನ್ನು ತಮ್ಮ ಪಕ್ಷದಲ್ಲಿ ವಿಲೀನಗೊಳಿಸಿಕೊಳ್ಳುವುದು. ಅದಾಗಬೇಕು ಎಂದರೆ, ಬಿಆರ್‌ಎಸ್‌ನ 39 ಶಾಸಕರ ಪೈಕಿ ಕನಿಷ್ಠ 26 ಮಂದಿಯಾದರೂ ಬಿಆರ್‌ಎಸ್ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್ ಸೇರಬೇಕು. ಮೂರನೇ ಎರಡರಷ್ಟು ಶಾಸಕರು ಪಕ್ಷ ತ್ಯಾಗ ಮಾಡಿದರೆ, ಆಗ ಆ ಪಕ್ಷವು ಇನ್ನೊಂದು ಪಕ್ಷದಲ್ಲಿ ವಿಲೀನವಾದಂತೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ.

ಗಮನಾರ್ಹ ಸಂಗತಿ ಎಂದರೆ, 2019ರ ಲೋಕಸಭಾ ಚುನಾವಣೆಯ ನಂತರ ಬಿಆರ್‌ಎಸ್ ಇದೇ ರೀತಿ ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆದುಕೊಂಡಿತ್ತು. 

ಬಿಆರ್‌ಎಸ್‌ನ ದಾನಂ ನಾಗೇಂದರ್ ಅವರು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿ ಈಗಾಗಲೇ ಮೂರು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷವು ಶಾಸಕರ ಅನರ್ಹತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದು, ಅದರಲ್ಲಿ ಇತರ ಪಕ್ಷಾಂತರಿ ಶಾಸಕರನ್ನೂ ಸೇರಿಸಲಾಗುವುದು ಎಂದು ಬಿಆರ್‌ಎಸ್‌ ಮುಖಂಡರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.