ADVERTISEMENT

ಬುರ್ಖಾ ನಿಷೇಧಕ್ಕೆ ಒತ್ತಾಯ ಮಾಡುವವರು 'ಗೂಂಗಟ್' ನಿಷೇಧ ಮಾಡುತ್ತೀರಾ?: ಒವೈಸಿ

​ಪ್ರಜಾವಾಣಿ ವಾರ್ತೆ
Published 2 ಮೇ 2019, 4:47 IST
Last Updated 2 ಮೇ 2019, 4:47 IST
   

ನವದೆಹಲಿ:ಶ್ರೀಲಂಕಾದಲ್ಲಿ ಭದ್ರತಾ ದೃಷ್ಟಿಯಿಂದ ಬುರ್ಖಾ ನಿಷೇಧ ಮಾಡಿದ ಬೆನ್ನಲ್ಲೇ, ಭಾರತದಲ್ಲೂ ಬುರ್ಖಾ ನಿಷೇಧ ಮಾಡಬೇಕು ಎಂದು ಶಿವಸೇನೆ ಒತ್ತಾಯಿಸಿದೆ.ಇದಕ್ಕೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ, ಉಡುಗೆಗಳಿಗೆ ನಿಷೇಧ ವಿಧಿಸಿ ಭಯೋತ್ಪಾದನೆ ವಿರುದ್ಧ ಹೋರಾಡುವುದರಬದಲು ಮನಸ್ಥಿತಿ ಬದಲಾಗಬೇಕಿದೆ ಎಂದಿದ್ದಾರೆ.

ಶಿವಸೇನೆಯ ಮುಖವಾಣಿ ಸಾಮ್ನಾವನ್ನು ಪೋಪಟ್‌ ಮಾಸ್ಟರ್ ಹೇಳಿದ ಒವೈಸಿ, ಇದರಲ್ಲಿ ಸಂಪಾದಕೀಯವೂ ಪೇಯ್ಡ್ ನ್ಯೂಸ್ (ಕಾಸಿಗಾಗಿ ಸುದ್ದಿ) ಆಗಿದೆ. ಇದು ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಆಗಿದ್ದು, ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಬುರ್ಖಾ ಅವರವರ ಆಯ್ಕೆ ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಶಿವಸೇನೆ ಓದಿಕೊಳ್ಳಲಿ. ನಿಮಗೆ ಏನು ಇಷ್ಟವೋ ಅದನ್ನು ಧರಿಸಬಹುದು, ಅದು ಬುರ್ಖಾ ಆಗಿರಬಹುದು, ಜೀನ್ಸ್ ಆಗಿರಬಹುದು.ಇಲ್ಲಿ ಆಯ್ಕೆ ಇದೆ. ಅದು ನಮ್ಮ ಮೂಲಭೂತ ಹಕ್ಕು ಕೂಡಾ ಆಗಿದೆ ಎಂದಿದ್ದಾರೆ ಒವೈಸಿ.

ADVERTISEMENT

ಮೋದಿಯನ್ನು ಪರಾಭವಗೊಳಿಸುತ್ತೇವೆ ಎಂದು ಶಿವಸೇನೆ ಈ ಹಿಂದೆ ಸಿಕ್ಕಾಪಟ್ಟೆ ಬರೆದಿತ್ತು. ಆದರೆ ಇವತ್ತು ಅವರೆಲ್ಲರೂ ಜತೆಯಾಗಿದ್ದಾರೆ. ಶಿವಸೇನೆ ಅಸಂಬದ್ಧವಾಗಿ ಮಾತನಾಡುತ್ತಿದೆ. ಕಾನೂನು ಚೌಕಟ್ಟುಗಳನ್ನು ಶಿವಸೇನೆ ಅರ್ಥ ಮಾಡಿಕೊಳ್ಳುವುದಿಲ್ಲ.
ಭಯೋತ್ಪಾದನೆಯೇ ಈಗ ಧರ್ಮ ಆಗಿಬಿಟ್ಟಿದೆ. ಈ ಹಿಂದೆ ಕೆಲವೊಬ್ಬರು ಮಹಿಳೆಯರು ಜೀನ್ಸ್ ಧರಿಸಬಾರದು ಎಂದು ಹೇಳಿದ್ದರು. ಭಾರತದಲ್ಲಿರುವ ಮಹಿಳೆಯರು ಗೂಂಗಟ್ (ಮುಖ ಮುಚ್ಚುವಂತೆ ತಲೆ ಮೇಲೆ ಸೆರಗು ಹೊದ್ದುಕೊಳ್ಳುವುದು) ಹಾಕಿಕೊಳ್ಳುವುದನ್ನೂ ನೀವು ನಿಷೇಧಿಸುತ್ತೀರಾ?ವಸ್ತ್ರಗಳಿಂದ ಭಯೋತ್ಪಾದನೆಯನ್ನು ನಿರ್ಧರಿಸುವುದಾದರೆಸಾಧ್ವಿ ಪ್ರಜ್ಞಾ ಧರಿಸಿರುವುದು ಏನನ್ನು?

ಚುನಾವಣೆಯ ವೇಳೆ ಜನರನ್ನು ಧ್ರುವೀಕರಣಗೊಳಿಸುವ ಕಾರ್ಯವನ್ನು ಶಿವಸೇನೆ ಮಾಡುತ್ತಿದೆ ಎಂದು ಆರೋಪಿಸಿರುವ ಒವೈಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.